ಉನ್ನಾವೋ (ಉತ್ತರಪ್ರದೇಶ): ಸರಿಯಾಗಿ ಆಂಗ್ಲ ಭಾಷೆಯನ್ನು ಓದಲು ಬಾರದ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರನ್ನು ಕರ್ತವ್ಯದಿಂದ ಅಮಾನತು ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ನವಂಬರ್ 28ರಂದು ತಪಾಸಣೆ ವೇಳೆ ಪುಸ್ತಕದಲ್ಲಿದ್ದ ಕೆಲವು ಇಂಗ್ಲಿಷ್ ಸಾಲುಗಳನ್ನು ಓದಲು ಬಾರದ ಕಾರಣ ಸಿಕಂದರ್‌ಪುರ ಸರೌಸಿಯ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರನ್ನು ಉನ್ನಾವೋ ಜಿಲ್ಲಾಧಿಕಾರಿ (ಜಿಲ್ಲಾ ಮಾಜಿಸ್ಟ್ರೇಟ್) ದೇವೇಂದ್ರ ಕುಮಾರ್ ಪಾಂಡೆ ಶನಿವಾರ ಅಮಾನತುಗೊಳಿಸಿದ್ದಾರೆ. ಈ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸುವಂತೆ ಶಿಕ್ಷಣಾಧಿಕಾರಿ (Basic Shiksha Adhikari-BSA) ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಎಸ್ಎ ಅಧಿಕಾರಿ ಪ್ರದೀಪ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ದೇವೇಂದ್ರ ಕುಮಾರ್ ಪಾಂಡೆ ಜೊತೆ ನಾನೂ ಶಾಲೆಯ ತಪಾಸಣೆಯಲ್ಲಿ ಭಾಗಿಯಾಗಿದ್ದೆ. 6 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಹಿಂದಿ ಪಠ್ಯವನ್ನು ಓದಲು ಹೇಳಿದಾಗ ಸಲೀಸಾಗಿ ಓದಿದ್ದಾರೆ. ಆದರೆ ಇಂಗ್ಲಿಷ್ ಪಠ್ಯವನ್ನು ಓದುವುದರಲ್ಲಿ ಶಿಕ್ಷಕರೂ ಸೇರಿ ಅನೇಕ ವಿದ್ಯಾರ್ಥಿಗಳು ವಿಫಲರಾಗಿದ್ದಾರೆ. ಶಿಕ್ಷಕರಿಗೆ ಇಂಗ್ಲಿಷ್ ಓದಲು ಬರದಿದ್ದ ಮೇಲೆ ಇನ್ನು ವಿದ್ಯಾರ್ಥಿಗಳಿಗೆ ಇವರು ಏನನ್ನು ಕಲಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿ, ಅಮಾನತುಗೊಳಿಸುವಂತೆ ಆದೇಶ ನೀಡಿದ್ದಾರೆ ಎಂದು ತಿಳಿಸಿದ್ದಾರೆ.