ನವದೆಹಲಿ: ದೇಶಾದ್ಯಂತ ಇಂದಿನಿಂದ ಅನ್ಲಾಕ್ 4.0 ಜಾರಿಗೊಂಡಿದ್ದು, ಸೆಪ್ಟೆಂಬರ್ 7ರಿಂದ ಮೆಟ್ರೋ ಸಂಚಾರಕ್ಕೆ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿರುವ ಕಾರಣ ಇಂದು ಹೊಸ ಮಾರ್ಗಸೂಚಿ ರಿಲೀಸ್ ಆಗಲಿದೆ.
15 ಮೆಟ್ರೋ ರೈಲು ನಿಗಮಗಳೊಂದಿಗೆ ಕೇಂದ್ರ ಸಚಿವ ದುರ್ಗಾ ಶಂಕರ್ ಮಿಶ್ರಾ ಸಭೆ ನಡೆಸಿದ್ದು, ಯಾವ ರೀತಿ ಮಾರ್ಗಸೂಚಿ ಅನುಕರಣೆ ಮಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಹಿತಿ ನೀಡಿದ್ದಾರೆ.
ನಿಲ್ದಾಣದಲ್ಲಿ ನಿಂತುಕೊಳ್ಳಲು ಮಾರ್ಕ್ ಮಾಡುವುದರ ಜತೆಗೆ, ಪ್ರತಿ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್, ಸಾಮಾಜಿಕ ಅಂತರ ಕಡ್ಡಾಯಗೊಳಿಸುವ ಸಾಧ್ಯತೆ ಇದೆ.
ಪ್ರತಿ ಕೋಚ್ನಲ್ಲಿ ಕಡಿಮೆ ಪ್ರಯಾಣಿಕರು ಪ್ರಯಾಣಕ್ಕೆ ಅನುಮತಿ ನೀಡುವ ಸಾಧ್ಯತೆ ಇದ್ದು, ಇಡೀ ಮೆಟ್ರೋ ರೈಲಿನಲ್ಲಿ 500 ಜನರಿಗೆ ಅವಕಾಶ ನೀಡುವ ಸಂಭವವಿದೆ. ಪ್ರಯಾಣಿಕರಿಗೆ ಟೋಕನ್ ನೀಡುವ ಸಾಧ್ಯತೆ ಕಡಿಮೆ ಇದ್ದು, ಸ್ಮಾರ್ಟ್ಕಾರ್ಡ್ ಬಳಕೆಗೆ ಅವಕಾಶ ನೀಡಬಹುದಾಗಿದೆ.