ಡೆಹ್ರಾಡೂನ್: ಕೊರೊನಾ ವೈರಸ್ ವಿರುದ್ಧ ಹೋರಾಡಲು ಲಾಕ್ಡೌನ್ ವಿಸ್ತರಿಸಲು ಮತ್ತು ಸಚಿವರು, ಶಾಸಕರ ವೇತನದಲ್ಲಿ ಶೇ. 30ರಷ್ಟು ಕಡಿತಗೊಳಿಸಲು ಉತ್ತರಾಖಾಂಡ್ ಸರ್ಕಾರ ಮುಂದಾಗಿದೆ.
ಮತ್ತೆ ಏಪ್ರಿಲ್ 14ರ ಬಳಿಕವೂ ಲಾಕ್ಡೌನ್ ಮುಂದುವರೆಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ವಕ್ತಾರ ಮದನ್ ಕೌಶಿಕ್ ಹೇಳಿದರು.
ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಮರಳಿದವರಿಂದ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹಠಾತ್ ಏರಿಕೆ ಕಂಡಿದೆ. ಹೀಗಾಗಿ ಲಾಕ್ಡೌನ್ ವಿಸ್ತರಣೆ ಅಗತ್ಯ. ಏಪ್ರಿಲ್ 14ರ ನಂತರ ಲಾಕ್ಡೌನ್ ವಿಸ್ತರಿಸಲು ಈಗಾಗಲೇ ಹಲವು ರಾಜ್ಯಗಳು ಬೆಂಬಲ ನೀಡಿವೆ.
ರಾಜ್ಯಕ್ಕೆ ಮರಳಿದ ತಬ್ಲಿಘಿಗಳು ಮತ್ತು ಅವರ ಸಂಪರ್ಕದಲ್ಲಿದ್ದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಅವರೆಲ್ಲಿದ್ದರೂ ಅವರನ್ನು ಬಿಡುವುದಿಲ್ಲ ಎಂದು ಕೌಶಿಕ್ ಹೇಳಿದರು. ಕೇವಲ ಒಂದು ವಾರದಲ್ಲಿ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 25 ಜಿಗಿತ ಕಂಡಿದ್ದು, ಈ ಮೂಲಕ 32ಕ್ಕೆ ಏರಿಕೆಯಾಗಿದೆ. ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಲ್ಲೇ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.
ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರು ಮತ್ತು ಸಚಿವರ ವೇತನದಲ್ಲಿ ಶೇ. 30ರಷ್ಟು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಶಾಸಕರಿಗೆ ಪ್ರತಿ ವರ್ಷ ನೀಡಲಾಗುವ ಕ್ಷೇತ್ರ ಅಭಿವೃದ್ಧಿ ಅನುದಾನದಲ್ಲಿ ಎರಡು ವರ್ಷಗಳವರೆಗೆ 1 ಕೋಟಿ ರೂ. ಇಳಿಸಲು ತೀರ್ಮಾನಿಸಲಾಗಿದೆ.