ಹೈದರಾಬಾದ್ : ಕೇಂದ್ರ ಜಾರಿಗೆ ತಂದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಡಿಸೆಂಬರ್ 8ರಂದು ಕರೆ ನೀಡಿರುವ ಭಾರತ ಬಂದ್‌ಗೆ ಟಿಆರ್‌ಎಸ್ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಟಿಆರ್‌ಎಸ್ ಅಧ್ಯಕ್ಷ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ತಮ್ಮ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಡಿಸೆಂಬರ್ 8ರ ಭಾರತ ಬಂದ್‌ಗೆ ಬೆಂಬಲ ಸೂಚಿಸಿದೆ ಎಂದು ಘೋಷಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನ್ಯಾಯಕ್ಕಾಗಿ ರೈತರು ಹೋರಾಡುತ್ತಿದ್ದಾರೆ. ಈ ಕಾಯ್ದೆಗಳಿಂದ ರೈತರ ಹಿತಾಸಕ್ತಿಗೆ ಧಕ್ಕೆ ತರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಟಿಆರ್‌ಎಸ್ ಈಗಾಗಲೇ ಸಂಸತ್ತಿನಲ್ಲಿ ಈ ಕಾಯ್ದೆಗಳನ್ನು ವಿರೋಧಿಸಿತ್ತು ಎಂದು ಕೆಸಿಆರ್ ಹೇಳಿದ್ದಾರೆ.
ಹೊಸ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ಹೋರಾಟ ಮುಂದುವರಿಯಬೇಕಿದೆ. ಭಾರತ ಬಂದ್ ಯಶಸ್ಸಿಗೆ ಟಿಆರ್‌ಎಸ್ ಕೈ ಜೋಡಿಸುತ್ತದೆ ಎಂದು ಹೇಳಿದರು. ಇದೇ ವೇಳೆ ತೆಲಂಗಾಣದ ಜನತೆಗೆ ರೈತರ ಪರವಾಗಿ ನಿಲ್ಲುವಂತೆ ಸಿಎಂ ಕೆಸಿಆರ್ ಮನವಿ ಮಾಡಿದರು.