ಬೆಂಗಳೂರು: ಇಸ್ರೋದ ಉನ್ನತ ವಿಜ್ಞಾನಿಯೊಬ್ಬರು ಮೂರು ವರ್ಷಗಳ ಹಿಂದೆ ತನಗೆ ವಿಷ ನೀಡಲಾಗಿತ್ತು ಎಂದು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ತಪನ್ ಮಿಶ್ರಾ ಎಂಬ ವಿಜ್ಞಾನಿ ಇಲ್ಲಿನ ಇಸ್ರೋ ಪ್ರಧಾನ ಕಚೇರಿಯಲ್ಲಿ ನಡೆದ ಸಂದರ್ಶನದಲ್ಲಿ, ಮೇ 23, 2017ರಂದು ನನಗೆ ಡೆಡ್ಲಿ ಆರ್ಸೆನಿಕ್ ಟ್ರೈಆಕ್ಸೈಡ್ ಎಂಬ ವಿಷ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ.
ದೋಸೆ ಹಾಗೂ ಚಟ್ನಿಯೊಂದಿಗೆ ಮಾರಕ ಪ್ರಮಾಣದಷ್ಟು ವಿಷವನ್ನು ಬೆರೆಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಮಿಶ್ರಾ ಪ್ರಸ್ತುತ ಇಸ್ರೋದಲ್ಲಿ ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಹಿಂದೆ ಅವರು ಅಹಮದಾಬಾದ್ ಮೂಲದ ಸ್ಪೇಸ್ ಅಪ್ಲಿಕೇಷನ್ ಸೆಂಟರ್ ಆಫ್ ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಜೇಷನ್ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 'ಲಾಂಗ್ ಕೆಪ್ಟ್ ಸೀಕ್ರೆಟ್' ಎಂಬ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಮಿಶ್ರಾ ಈ ಕುರಿತು ಮಾಹಿತಿ ನೀಡಿದ್ದಾರೆ.
![top-isro-scientist-claims-he-was-poisoned-three-years-ago](https://etvbharatimages.akamaized.net/etvbharat/prod-images/10134838_medh.jpg)
ಆ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ತಮಗೆ ಆರ್ಸೆನಿಕ್ ವಿಷದ ಕುರಿತು ಎಚ್ಚರಿಸಿದ್ದರು ಮತ್ತು ನಿಖರವಾದ ಪರಿಹಾರಕ್ಕಾಗಿ ವೈದ್ಯರು ಸಹಾಯ ಮಾಡಿದ್ದಾರೆ. ತೀವ್ರ ಉಸಿರಾಟದ ತೊಂದರೆ, ಚರ್ಮ ರೋಗ ಮತ್ತು ಶಿಲೀಂದ್ರಗಳ ಸೋಂಕು ಸೇರಿದಂತೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೆ ಎಂದು ಮಿಶ್ರಾ ಹೇಳಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
![top-isro-scientist-claims-he-was-poisoned-three-years-ago](https://etvbharatimages.akamaized.net/etvbharat/prod-images/10134838_med.jpg)
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೂ (ಇಸ್ರೋ) ಹಾನಿ ಮಾಡಲು ಯಾರೋ ಬಯಸುತ್ತಿದ್ದಾರೆ. ಅವರನ್ನು ಹಿಡಿದು ಶಿಕ್ಷೆ ನೀಡುವುದೊಂದೇ ಪರಿಹಾ. ಖಂಡಿತವಾಗಿಯೂ ಇದು ಸಾಮಾನ್ಯರ ಕೆಲಸವಲ್ಲ, ಬದಲಾಗಿ ನಮ್ಮೊಳಗಿನ ಕೆಲವು ಅತ್ಯಾಧುನಿಕ ಬೇಹುಗಾರಿಕಾ ಸಂಸ್ಥೆಯ ಕೆಲಸ ಎಂದು ತಪನ್ ಮಿಶ್ರಾ ಆರೋಪಿಸಿದ್ದಾರೆ.
ಇಸ್ರೋದಲ್ಲಿರುವ 2 ಸಾವಿರಕ್ಕೂ ಅಧಿಕ ವಿಜ್ಞಾನಿಗಳಿಗೆ ಭದ್ರತೆ ಬದಲು ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ನನಗ್ಯಾಕೆ ವಿಷ ನೀಡಿದ್ದರು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ನಾನು ಕ್ರಿಟಿಕಲ್ ಟೆಕ್ನೋಲಜಿಯಲ್ಲಿ ಕೆಲಸ ಮಾಡಿರುವುದು ಇದಕ್ಕೆ ಕಾರಣವಿರಬಹುದು. ಈ ಕುರಿತು ತನಿಖೆ ನಡೆಸಿದರೆ ಸರಿಯಾದ ಮಾಹಿತಿ ಹೊರ ಬರಬಹುದು ಎಂದು ಅವರು ಹೇಳಿದ್ದಾರೆ.
ನಾನು ಅನೇಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದ್ದೆ. ಚರ್ಮದ ಸಮಸ್ಯೆ ಉಂಟಾಗಿದ್ದವು. ಸುದೀರ್ಘ ಚಿಕಿತ್ಸೆಯ ಬಳಿಕ ನಾನು ಚೇತರಿಸಿಕೊಂಡಿದ್ದೇನೆ. ಆದರೆ ನಾನು ಇದ್ಯಾವುದಕ್ಕೂ ಹೆದರುವುದಿಲ್ಲ, ದೇಶಕ್ಕಾಗಿ ನನ್ನ ಸೇವೆಯನ್ನು ಮುಂದುವರಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.