ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಬಿಹಾರ ಪೊಲೀಸರಿಗೆ ಸುಶಾಂತ್ ತಂದೆ ದೂರು ನೀಡಿದ ಬಳಿಕ ಇಡಿ, ಸುಶಾಂತ್ ಸಿಂಗ್ ರಾಜಪೂತ್ ಅವರ ಕಂಪನಿಯ ಹಣಕಾಸಿನ ವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿಯನ್ನು ಇಡಿ ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಅವರು ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಒಡೆತನದ ವಿವಿಡ್ರೇಜ್ ರಿಯಾಲಿಟಿ ಎಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಫ್ರಂಟ್ ಇಂಡಿಯಾ ಫಾರ್ ವರ್ಲ್ಡ್ ಫೌಂಡೇಶನ್ ಕಂಪನಿಗಳಿವೆ. ಎರಡೂ ಸಂಸ್ಥೆಗಳಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೊತೆಗೆ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೋವಿಕ್ ಚಕ್ರವರ್ತಿ ನಿರ್ದೇಶಕರಾಗಿದ್ದಾರೆ. ಎರಡೂ ಕಂಪನಿಗಳ ನೋಂದಾಯಿತ ವಿಳಾಸ ನವೀ ಮುಂಬಯಿಯಲ್ಲಿದ್ದು, ಇವೆರಡೂ ಪ್ಲಾಟ್ ರಿಯಾ ಚಕ್ರವರ್ತಿಯ ತಂದೆಯ ಹೆಸರಿನಲ್ಲಿ ಇದೆ.
ಸುಶಾಂತ್ ಅವರ ಹೆಸರಿನಲ್ಲಿ 4 ಬ್ಯಾಂಕ್ ಖಾತೆಗಳಿವೆ. ಈ 4 ಬ್ಯಾಂಕ್ಗಳ ಮೂಲಕ ಸುಶಾಂತ್ ಸಿಂಗ್ 18 ಕೋಟಿ ರೂ ವ್ಯವಹಾರ ನಡೆಸಿದ್ದಾರೆ. ಈ ನಡುವೆ, 15 ಕೋಟಿ ರೂ.ಗಳನ್ನು ಹಂತ ಹಂತವಾಗಿ ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ. ಒಂದು ಮೂಲದ ಪ್ರಕಾರ ಸುಶಾಂತ್ ಸಿಂಗ್ ಖಾತೆಗಳಿಂದ ಹೆಚ್ಚಿನ ಹಣವನ್ನ ರಿಯಾ ಚಕ್ರವರ್ತಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶಂಕಿಸಿದೆ.
ಈ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸುಶಾಂತ್ ಸಿಂಗ್ ಅವರ ಚಾರ್ಟರ್ಡ್ ಅಕೌಂಟೆಂಟ್ ಅವರನ್ನ ವಿಚಾರಣೆಗೆ ಒಳಪಡಿಸಿದ್ದ ಇಡಿ, ಉತ್ತರ ಪಡೆದುಕೊಂಡಿದೆ. ಈ ಮಧ್ಯೆ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೋವಿಕ್ ಚಕ್ರವರ್ತಿ ಈ ಎರಡು ಕಂಪನಿಗಳ ವಹಿವಾಟಿನಲ್ಲಿ ಸಾಕಷ್ಟು ಅಕ್ರಮಗಳನ್ನ ಎಸೆಗಿದ್ದಾರೆ ಎಂದು ಸುಶಾಂತ್ ಸಿಂಗ್ ಅವರ ಕುಟುಂಬ ಆರೋಪಿಸಿದೆ.