ನವದೆಹಲಿ: ಕೊರೊನಾ ವೈರಸ್ ಸೋಂಕು ನಿಯಂತ್ರಿಸಲು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೊವಾಕ್ಸಿನ್ ಲಸಿಕೆಯ ಮೂರನೇ ಮತ್ತು ಅಂತಿಮ ಹಂತದ ಕ್ಲಿನಿಕಲ್ (ಮಾನವ) ಪ್ರಯೋಗಗಳು ನವೆಂಬರ್‌ನಲ್ಲಿ ಪ್ರಾರಂಭವಾಗಲಿವೆ.
ಕೊವಾಕ್ಸಿನ್ ಕ್ಲಿನಿಕಲ್ ಪ್ರಯೋಗಗಳು ನವೆಂಬರ್ ತಿಂಗಳಿನ ಮೊದಲ ಅಥವಾ ಎರಡನೇ ವಾರದಲ್ಲಿ ಶುರುವಾಗಬಹುದು ಎಂದು ನಿಜಾಮ್‌ನ ವೈದ್ಯಕೀಯ ವಿಜ್ಞಾನ ಸಂಸ್ಥೆ (ನಿಮ್ಸ್)ಯ ಮೂಲಗಳು ಹೇಳುತ್ತಿವೆ.
ನಿಮ್ಸ್‌ನಲ್ಲಿ ಮೊದಲ ಹಂತದ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿವೆ. ಎರಡನೇ ಹಂತದ ಪರೀಕ್ಷೆಗಳಲ್ಲಿ 12 ಜನರಿಗೆ ಬೂಸ್ಟರ್ ಡೋಸ್ ನೀಡುವ ಮೂಲಕ ಲಸಿಕೆ ನೀಡಲಾಯಿತು. ಮುಂದಿನ 3 ದಿನಗಳಲ್ಲಿ 55 ಜನರಿಗೆ ಲಸಿಕೆ ನೀಡಲಾಗುವುದು ಎಂದು ಕ್ಲಿನಿಕಲ್ ಟ್ರಯಲ್ಸ್ ನೋಡಲ್ ಅಧಿಕಾರಿ ಡಾ.ಸಿ.ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.
14 ದಿನಗಳ ನಂತರ ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ಕಳುಹಿಸಲಾಗುವುದು. ಮತ್ತೊಂದೆಡೆ, ಮೊದಲ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ನಿಮ್ಸ್‌ನಲ್ಲಿ 45 ಜನರಿಗೆ ಲಸಿಕೆ ನೀಡಲಾಗಿತ್ತು. ಇದರ ಫಲಿತಾಂಶಗಳು ಭರವಸೆ ಮೂಡಿಸಿವೆ ಎಂದು ವೈದ್ಯಕೀಯ ತಂಡ ತಿಳಿಸಿದೆ.
ಮೊದಲ ಮತ್ತು ಎರಡನೇ ಹಂತಗಳಲ್ಲಿ ಒಟ್ಟು 100 ಸ್ವಯಂಸೇವಕರು ಈ ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಸ್ವಯಂಸೇವಕರ ಆರೋಗ್ಯದ ಮೇಲ್ವಿಚಾರಣೆ ಸುಮಾರು 6 ತಿಂಗಳಿನಿಂದ ನಡೆಯುತ್ತಿದೆ. ಮೂರನೇ ಹಂತದ ಪರೀಕ್ಷೆಯಲ್ಲಿ 200 ಜನರಿಗೆ ಲಸಿಕೆ ಹಾಕುವ ಸಾಧ್ಯತೆಯಿದೆ ಎಂದು ಡಾ.ಪ್ರಭಾಕರ್ ರೆಡ್ಡಿ ಹೇಳುತ್ತಾರೆ.
ಕೋವಾಕ್ಸಿನ್ ಅಭಿವೃದ್ಧಿಗಾಗಿ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಮುಖ ಔಷಧೀಯ ಕಂಪನಿ ಭಾರತ್ ಬಯೋಟೆಕ್ ಜೊತೆ ಸಹಕರಿಸುತ್ತಿದೆ. ಪ್ರಸಿದ್ದ ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ತನ್ನ ಕೋವಿಡ್ ಲಸಿಕೆ ಕೋವಾಕ್ಸಿನ್ನಲ್ಲಿ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸಲು ಅಮೆರಿಕದ ಕನಾಸ್ ಮೂಲದ ವೈರೋವ್ಯಾಕ್ಸ್ ಅಡ್ಜ್ಯುವೆಂಟ್ ಆಲ್ಹೈಡ್ರಾಕ್ಸಿಕ್ವಿಮ್- II ಅನ್ನು ಬಳಸಲಿದೆ.
ಕೋವಾಕ್ಸಿನ್ ಅನ್ನುವುದು ಭಾರತ್ ಬಯೋಟೆಕ್ ಸಂಸ್ಥೆಯ SARS-CoV-2 ಲಸಿಕೆಯಾಗಿದೆ. ಇದನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಪರವಾನಗಿ ಒಪ್ಪಂದದ ಮೂಲಕ ವೈರೋವ್ಯಾಕ್ಸ್ ಅಡ್ಜ್ಯುವೆಂಟ್ ಆಲ್ಹೈಡ್ರಾಕ್ಸಿಕ್ವಿಮ್- II ಅನ್ನು ಕೋವಾ ಕ್ಸಿನ್ನಲ್ಲಿ ಸೇರಿಸಲು ಭಾರತ್ ಬಯೋಟೆಕ್ ನಿರ್ಧರಿಸಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಐ) ಅನುಮತಿ ಮೇರೆಗೆ ಈ ಲಸಿಕೆಯ ಎರಡನೇ ಹಂತದ ವೈದ್ಯಕೀಯ ಪ್ರಯೋಗ ನಡೆಯುತ್ತಿದೆ.