ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರೋಡ್ ಶೋ ಮೂಲಕ ಮತ್ತು ಅಹಮದಾಬಾದಿನ ಮೊಟೆರಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಆತಿಥ್ಯ ಸ್ವೀಕರಿಸಿದರು, ಜನರು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರನ್ನು ಸ್ವಾಗತಿಸಲು ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದರು. ಅಮೆರಿಕದ ಅಧ್ಯಕ್ಷರಿಗೆ ಭಾರತದಲ್ಲಿ ಉತ್ಸಾಹಭರಿತ ಸ್ವಾಗತ ದೊರೆತಿರುವುದು ಇದೇ ಮೊದಲಲ್ಲ ಎಂಬುದನ್ನು ಗಮನಿಸಬೇಕು. 1959 ರಲ್ಲಿ ಅಧ್ಯಕ್ಷ ಐಸೆನ್ ಹೋವರ್ ಭಾರತಕ್ಕೆ ಭೇಟಿ ನೀಡಿದಾಗ, ಅವರು ನವದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಆದ್ದರಿಂದ, ಮೊಟೆರಾ ಕ್ರೀಡಾಂಗಣದ ಸ್ವಾಗತ ಕಾರ್ಯಕ್ರಮ ಈ ಹಿಂದೆ ನಡೆದ ಇಂತಹ ಘಟನೆಗಳ ಮುಂದುವರಿದ ಭಾಗ ಆಗಿದೆ. ಅಲ್ಲದೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರು ಹೂಸ್ಟನ್ ನಲ್ಲಿ ಪಾಲ್ಗೊಂಡಿದ್ದ ಬೃಹತ್ ರ‍್ಯಾಲಿ ಮತ್ತು 2017 ರಲ್ಲಿ ಪ್ರಧಾನಿ ಶಿಂಜೊ ಅಬೆ ಭಾರತಕ್ಕೆ ಭೇಟಿ ನೀಡಿದ್ದಾಗ ಅಹಮದಾಬಾದಿನಲ್ಲಿ ಆಯೋಜಿಸಿದ್ದ ಬೃಹತ್ ರೋಡ್ ಶೋ ಮುಂತಾದ ಕೆಲವು ಉದಾಹರಣೆಗಳನ್ನು ಕೂಡ ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಭಾರತ - ಅಮೆರಿಕ ಸಂಬಂಧ ಮತ್ತಷ್ಟು ಗಳಸ್ಯ ಕಂಠಸ್ಯ ಆಗಲು ಕಾರಣ ಚೀನಾವನ್ನು ಹದ್ದುಬಸ್ತಿನಲ್ಲಿ ಇಡುವುದು ಎಂದು ಕೆಲವರು ವಾದಿಸುತ್ತಾರೆ. ಅಂತಹ ಗ್ರಹಿಕೆಯಲ್ಲಿ ಸತ್ಯದ ಒಂದು ಅಂಶ ಇರಬಹುದು. ವಾಸ್ತವವಾಗಿ, ಅಧ್ಯಕ್ಷ ಟ್ರಂಪ್ ಮೊಟೆರಾ ಕ್ರೀಡಾಂಗಣದಲ್ಲಿ (ಅಹಮದಾಬಾದ್) ಮಾತನಾಡುತ್ತಾ ಹೀಗೆ ಹೇಳಿದರು: “ಜಗತ್ತಿನಲ್ಲಿ ದಬ್ಬಾಳಿಕೆ, ಬೆದರಿಕೆ ಮತ್ತು ಆಕ್ರಮಣಶೀಲತೆಯ ಮೂಲಕ ಅಧಿಕಾರ ಬಯಸುವ ದೇಶಕ್ಕೂ ತನ್ನ ಜನರನ್ನು ಮುಕ್ತಗೊಳಿಸುವ, ಕನಸುಗಳನ್ನು ಬೆಂಬತ್ತಿ ಹೋಗಲು ಅವರಿಗೆ ಅವಕಾಶ ಮಾಡಿಕೊಟ್ಟು ಏಳಿಗೆ ಹೊಂದುವ ದೇಶಕ್ಕೂ ವ್ಯತ್ಯಾಸಗಳು ಇವೆ”. ಈ ಮೂಲಕ ಭಾರತ ಮತ್ತು ಚೀನಾ ನಡುವಿನ ವ್ಯತ್ಯಾಸವನ್ನು ಅಧ್ಯಕ್ಷ ಟ್ರಂಪ್ ಪರೋಕ್ಷವಾಗಿ ಹೊರ ಹಾಕಿದ್ದಾರೆ ಎಂದು ಅನೇಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೂ, ಭಾರತ - ಅಮೆರಿಕ ದ್ವಿಪಕ್ಷೀಯ ಸಂಬಂಧಗಳ ಪ್ರಮಾಣವನ್ನು ಕೇವಲ ಚೀನಾ ಮೂಸೆಯಿಂದ ವ್ಯಾಖ್ಯಾನ ಮಾಡಲು ಆಗುವುದಿಲ್ಲ ಮತ್ತು ಚೀನಾ ಉದಯಕ್ಕೆ ಮುಂಚಿನಿಂದಲೂ ಅಂದರೆ ಕಳೆದ ಕೆಲವು ದಶಕಗಳಿಂದಲೂ ಭಾರತ - ಅಮೆರಿಕ ನಡುವೆ ಬಹು ಆಯಾಮದ ಸಂಬಂಧಗಳು ಬೆಳೆದಿವೆ ಎಂಬುದನ್ನು ಗಮನಿಸಬೇಕು. ಅಮೆರಿಕದಲ್ಲಿ ವಾಸಿಸುವ ಬಹುದೊಡ್ಡ ಭಾರತೀಯ ವಲಸಿಗರು ಜನರಿಂದ ಜನರ ಸಂವಹನಕ್ಕೆ ಕೊಡುಗೆ ನೀಡುತ್ತಿದ್ದಾರೆ. ಭಾರತದಲ್ಲಿ ಇಂಗ್ಲಿಷಿನ ವ್ಯಾಪಕ ಬಳಕೆ ಎರಡೂ ದೇಶಗಳ ನಡುವೆ ಉತ್ತಮ ಸಂವಹನಕ್ಕೆ ಅನುಕೂಲ ಮಾಡಿಕೊಟ್ಟಿದೆ. ಎರಡೂ ದೇಶಗಳು ಪ್ರಜಾಪ್ರಭುತ್ವ ರಾಷ್ಟ್ರಗಳಾಗಿವೆ ಮತ್ತು ಎರಡೂ ದೇಶಗಳಲ್ಲಿನ ನಾಯಕತ್ವ ತಾನು ಕಾರ್ಯನಿರ್ವಹಿಸುವ ರಾಜಕೀಯ ನಿರ್ಬಂಧ ಮತ್ತು ಅವಕಾಶಗಳ ಬಗ್ಗೆ ಅರ್ಥಗರ್ಭಿತ ತಿಳಿವಳಿಕೆ ಪಡೆದಿದೆ. ಈ ಅರಿವಿನಿಂದಾಗಿ ಅಧ್ಯಕ್ಷ ಟ್ರಂಪ್ ಅವರು ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಮುಂದಾಗುತ್ತಿಲ್ಲ. ಉದಾಹರಣೆಗೆ, ನಾಗರಿಕ ತಿದ್ದುಪಡಿ ಕಾಯ್ದೆ ಬಗ್ಗೆ ನಿರ್ದಿಷ್ಟವಾಗಿ ಕೇಳಿದಾಗ, ಅಧ್ಯಕ್ಷ ಟ್ರಂಪ್ ಅವರ ಪ್ರತಿಕ್ರಿಯೆ ಹೀಗಿತ್ತು: “ನಾನು ಅದನ್ನು ಚರ್ಚಿಸಲು ಬಯಸುವುದಿಲ್ಲ. ಅದನ್ನು ನಾನು ಭಾರತಕ್ಕೆ ಬಿಡಲು ಇಚ್ಛಿಸುತ್ತೇನೆ ಮತ್ತು ಅವರು ಜನರಿಗೆ ಸೂಕ್ತ ಎನಿಸುವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಆಶಿಸುತ್ತೇನೆ. ಅದು ನಿಜವಾಗಿಯೂ ಭಾರತಕ್ಕೆ ಬಿಟ್ಟದ್ದು.”
ಭಾರತದ ಪಾಲಿಗೆ, ಅಮೆರಿಕ ಪ್ರಮುಖ ವ್ಯಾಪಾರ ಪಾಲುದಾರ. ನಾವು ಸೇವೆಗಳ ವ್ಯಾಪಾರ ಮತ್ತು ಸರಕು ವ್ಯಾಪಾರ ಎರಡನ್ನೂ ಪರಿಗಣನೆಗೆ ತೆಗೆದುಕೊಂಡರೆ ಭಾರತ - ಅಮೆರಿಕ ವ್ಯಾಪಾರ 2018ರಲ್ಲಿ ಸುಮಾರು 2142.6 ಶತಕೋಟಿ ಆಗಿತ್ತು. ಕಳೆದ ಕೆಲವು ವರ್ಷಗಳಿಂದ ಭಾರತ ಚೀನಾದೊಂದಿಗೆ, ಸರಕು ವ್ಯಾಪಾರದಲ್ಲಿ ಸುಮಾರು 50 ಶತಕೋಟಿ ಮೌಲ್ಯದ ವ್ಯಾಪಾರ ಕೊರತೆ ಎದುರಿಸುತ್ತಿದೆ. ಭಾರತ ಅಮೆರಿಕದೊಂದಿಗೆ ನಿರಂತರ ವ್ಯಾಪಾರ ವೃದ್ಧಿ ( 2018 ರಲ್ಲಿ ಸರಕುಗಳಲ್ಲಿ 20.8 ಶತಕೋಟಿ ಡಾಲರ್ ) ಮಾಡಿಕೊಂಡಿದೆ. ಅಮೆರಿಕದೊಂದಿಗಿನ ವ್ಯಾಪಾರ ಸಂಬಂಧವನ್ನು ಹೆಚ್ಚಿಸಲು ಭಾರತ ಏಕೆ ಉತ್ಸುಕವಾಗಿದೆ ಎಂಬ ಬಗ್ಗೆ ವಿವರಣೆ ನೀಡಲು ಈ ತ್ವರಿತ ಹೋಲಿಕೆ ಸಾಕು. ಮುಕ್ತ ವ್ಯಾಪಾರ ಒಪ್ಪಂದವನ್ನು ( ಎಫ್ ಟಿ ಎ ) ಅಂತಿಮಗೊಳಿಸಲು ಎರಡೂ ದೇಶಗಳು ತೀವ್ರ ಮಾತುಕತೆ ನಡೆಸುತ್ತಿವೆ ಮತ್ತು ಹಿರಿಯ ನಾಯಕರು ಈ ಭೇಟಿಯ ಸಂದರ್ಭದಲ್ಲಿ ಮೂಡಿಸಿದ ಅಭಿಪ್ರಾಯಗಳಿಂದಾಗಿ ಇದು ಶೀಘ್ರದಲ್ಲೇ ಇತ್ಯರ್ಥ ಆಗಲಿದೆ ಎಂಬ ಭಾವನೆ ಮೂಡಿಸಿತು.
ಮಾತುಕತೆ ನಡೆಸುವ ದೇಶಗಳು ಭಾರತ ಮತ್ತು ಅಮೆರಿಕದ ರೀತಿಯಲ್ಲಿ ಭಿನ್ನ ಆರ್ಥಿಕತೆಯಿಂದ ಕೂಡಿದ್ದರೆ ಆಗ ವ್ಯಾಪಾರ ಒಪ್ಪಂದಗಳು ಯಶಸ್ವಿ ಆಗುತ್ತವೆ, ವ್ಯಾಪಾರ ಒಪ್ಪಂದದ ತೀರ್ಮಾನಗಳಲ್ಲಿನ ವಿಳಂಬಕ್ಕೆ ಅನೇಕ ಅಂಶಗಳು ಕಾರಣ. ಟ್ರಂಪ್ ನ್ಯೂಯಾರ್ಕ್‌ನಿಂದ ಬಂದಿದ್ದರೂ, ಅವರ ರಾಜಕೀಯ ನೆಲೆ ಗ್ರಾಮೀಣ ಅಮೆರಿಕದಲ್ಲಿದೆಯೇ ವಿನಾ ಅಮೆರಿಕದ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಇರುವ ಕೈಗಾರಿಕೀಕೃತ ವಿಭಾಗ ಅಥವಾ ಕ್ಷೇತ್ರಗಳಲ್ಲಿ ಅಲ್ಲ. ಇದರ ಪರಿಣಾಮ, ಇತರ ದೇಶಗಳಿಂದ ಕೃಷಿ ಕ್ಷೇತ್ರದಲ್ಲಿ ದೊಡ್ಡ ರಿಯಾಯಿತಿ ಪಡೆಯುವ ಬಗೆಗೆ ಅಧ್ಯಕ್ಷ ಟ್ರಂಪ್ ಅವರಿಗೆ ಆಸಕ್ತಿ ಇದೆ. ಭಾರತದಂತಹ ದೇಶಗಳಿಗೆ ಕೃಷಿ ಮತ್ತು ಪಶುಸಂಗೋಪನೆ ಕ್ಷೇತ್ರಗಳಲ್ಲಿ ರಿಯಾಯಿತಿ ನೀಡುವುದು ಕಷ್ಟ ಆಗುತ್ತದೆ.
ಇದಲ್ಲದೆ, ಅಧ್ಯಕ್ಷ ಟ್ರಂಪ್ ಅವರ ಸಂಧಾನ ಶೈಲಿ ಕೂಡ ಸಮಸ್ಯೆಯ ಮೂಲ ಆಗಿದೆ. ಅಮೆರಿಕದ ಅಂತರಂಗದಲ್ಲಿ ಒಂದು ಬೃಹತ್ ರಾಜಕೀಯ ಕ್ಷೇತ್ರ ಇದ್ದು ಅದು ಜಾಗತಿಕ ರಾಜಕೀಯದಲ್ಲಿ ಅಮೆರಿಕದ ತುಲನಾತ್ಮಕ ಕುಸಿತದ ಬಗ್ಗೆ ಕಳವಳಗೊಂಡಿದೆ. ಅಧ್ಯಕ್ಷ ಟ್ರಂಪ್ ಅಧಿಕಾರ ಹಿಡಿಯಲು ಬಳಸಿದ "ಅಮೆರಿಕವನ್ನು ಮತ್ತೆ ಮಹತ್ವದ್ದಾಗಿಸಿ" ಎಂಬ ಘೋಷಣೆಯನ್ನೇ ಹಿಡಿದು ಅಲ್ಲಿನ ಸಮಾಜದೊಳಗಿನ ಭಾವನಾತ್ಮಕ ಅವಶ್ಯಕತೆಗಳನ್ನು ನಿಖರವಾಗಿ ಪರಿಹರಿಸಬೇಕಿದೆ. ಅಧ್ಯಕ್ಷ ಟ್ರಂಪ್ ಅವರು ಹೇರಿರುವ ದೇಶೀಯ ಅನಿವಾರ್ಯತೆಗಳು ಮತ್ತು ಅವರು ಅಮೆರಿಕ ಪರವಾಗಿ ಒಪ್ಪಂದಗಳನ್ನು ಗೆಲ್ಲುತ್ತಿದ್ದಾರೆ ಎಂದು ಸಂವಹನ ಮಾಡುವ ಅಗತ್ಯವು ವ್ಯಾಪಾರ ಮಾತುಕತೆಗಳಿಗೆ ಹೊಸ ಸಂಕೀರ್ಣತೆ ತಂದುಕೊಟ್ಟಿದೆ. ಆಗಾಗ್ಗೆ ತಾವು ಗೆಲ್ಲುವುದನ್ನು ಅಧ್ಯಕ್ಷ ಟ್ರಂಪ್ ಅಮೆರಿಕ ವ್ಯಾಪಾರ ಬಿಕ್ಕಟ್ಟನ್ನು ಕಡಿತಗೊಳಿಸುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ, ಇದು ಸಮಸ್ಯಾತ್ಮಕವಾಗಿದೆ. ಉದಾಹರಣೆಗೆ, ಚೀನಾದೊಂದಿಗಿನ ವ್ಯಾಪಾರ ಕೊರತೆಗೆ ( 2018 ರಲ್ಲಿ 8378 ಶತಕೋಟಿ ಡಾಲರ್) ಹೋಲಿಸಿದರೆ ಅಮೆರಿಕಕ್ಕೆ ಭಾರತದೊಂದಿಗೆ ಇರುವ ವ್ಯಾಪಾರ ಕೊರತೆ (ವ್ಯಾಪಾರದಲ್ಲಿ 8 20.8 ಶತಕೋಟಿ ಮತ್ತು ಸೇವೆಯಲ್ಲಿ 4.4 ಶತಕೋಟಿ ಡಾಲರ್ ) ಕಡಿಮೆ ಇದೆ. ಆದರೂ, ಅಧ್ಯಕ್ಷ ಟ್ರಂಪ್ ರಕ್ಷಣಾತ್ಮಕ ಆರ್ಥಿಕತೆ ಎಂದು ಕರೆಯುವ ಮೂಲಕ ಭಾರತ ಮತ್ತು ಚೀನಾವನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗುತ್ತಾರೆ. ಇದಲ್ಲದೆ, ನಾವು ರಕ್ಷಣಾ ಖರೀದಿ, ಬೋಯಿಂಗ್ ಜೊತೆಗಿನ ಭಾರತೀಯ ವಿಮಾನಯಾನ ಸಂಸ್ಥೆಗಳ ವ್ಯಾಪಾರ ಮತ್ತು ಅಮೆರಿಕದಲ್ಲಿನ ಭಾರತೀಯ ವಿದ್ಯಾರ್ಥಿಗಳ ಖರ್ಚುವೆಚ್ಚದೊಂದಿಗೆ ನೋಡಿದಾಗ, ಇದು ಬಹುಶಃ ಭಾರತದ ಜೊತೆಗಿನ ಅಮೆರಿಕದ ವ್ಯಾಪಾರ ಕೊರತೆಯನ್ನು ಸರಿದೂಗಿಸುತ್ತದೆ.
ವಾಷಿಂಗ್ಟನ್ ಮತ್ತು ನವದೆಹಲಿ ನಡುವೆ ಸಂಬಂಧ ಸರಾಗವಾಗುತ್ತಿದ್ದು ವಿಶ್ವಾಸ ಹೆಚ್ಚುತ್ತಿದೆ, ಇದು ಹೈಟೆಕ್ ಶಸ್ತ್ರಾಸ್ತ್ರಗಳ ವ್ಯವಸ್ಥೆಯನ್ನು ಭಾರತಕ್ಕೆ ವರ್ಗಾಯಿಸಲು ಅಮೆರಿಕಕ್ಕೆ ಪ್ರೇರಣೆ ನೀಡುತ್ತಿದೆ. ಭಾರತಕ್ಕೆ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್ ( ಐ ಎ ಡಿ ಡಬ್ಲ್ಯೂ ಎಸ್ ) ಮತ್ತು ಸಮುದ್ರ ರಕ್ಷಕ ಸಶಸ್ತ್ರ ಡ್ರೋನ್‌ಗಳನ್ನು ಭಾರತಕ್ಕೆ ಒದಗಿಸುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಗಳಾದ ಪಿ - 8 ಐ ಜಲಾಂತರ್ಗಾಮಿ ಯುದ್ಧ ವಿಮಾನ, ಸಿ - 17 ಗ್ಲೋಬ್ ಮಾಸ್ಟರ್, ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್, ಸಿ -130 ಜೆ ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನ, ಚಿನೂಕ್ ಹೆವಿ - ಲಿಫ್ಟ್ ಹೆಲಿಕಾಪ್ಟರ್‌ಗಳು, ಎ ಎನ್ – ಟಿ ಪಿ ಕ್ಯು ಶಸ್ತ್ರಾಸ್ತ್ರ ಪತ್ತೆ ರಾಡಾರ್ ಗಳು ಮತ್ತು ಎಂ - 777 ಅಲ್ಟ್ರಾ- ಲೈಟ್ ಹೊವಿಟ್ಜರ್‌ಗಳು ಇತ್ಯಾದಿ ಭಾರತದ ಬತ್ತಳಿಕೆಯಲ್ಲಿ ಇವೆ. ಟ್ರಂಪ್ ಭೇಟಿ ಸಮಯದಲ್ಲಿ, ಎಂ ಎಚ್ - 60 ಆರ್ ಹೆಲಿಕಾಪ್ಟರ್ ಮತ್ತು ಎ ಹೆಚ್ - 64 ಇ ಅಪಾಚೆ ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಒಪ್ಪಿಗೆ ನೀಡಿದೆ. ಅಮೆರಿಕದಿಂದ ಹೆಚ್ಚಿನ ಖರೀದಿಯ ಹೊರತಾಗಿಯೂ, ಭಾರತದ ರಕ್ಷಣಾ ಖರೀದಿಗಳಲ್ಲಿ ರಷ್ಯಾ ಪಾಲು ಇನ್ನೂ ಶೇ 60ರಷ್ಟು ಇದೆ ಎಂಬುದನ್ನು ಗಮನಿಸಬೇಕು. ಮುಂಬರುವ ವರ್ಷಗಳಲ್ಲಿ ಈ ರಕ್ಷಣಾ ವ್ಯವಸ್ಥೆಯ ಕನಿಷ್ಠ ಕೆಲವು ಘಟಕಗಳನ್ನಾದರೂ ದೇಶೀಯವಾಗಿ ತಯಾರಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಭಾರತಕ್ಕೆ ಮುಖ್ಯ ಆಗಿದೆ.
ಆಸಕ್ತಿದಾಯಕ ಆಯಾಮ ಎಂದರೆ "ವ್ಯಾಪಾರ, ಸಂವಹನಕ್ಕೆ ಅನುಕೂಲವಾಗುವ ಮುಕ್ತ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಅಂತರ್ಜಾಲ"ವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಎರಡೂ ದೇಶಗಳು ಡಿಜಿಟಲ್ ಮೂಲಸೌಕರ್ಯ ಕುರಿತಂತೆ ಏಕತ್ರವಾಗಿ ಇವೆ. ಭಾರತದಲ್ಲಿ 5 ಜಿ ನೆಟ್‌ವರ್ಕ್‌ನ ಹಾದಿ ತೆರೆಯಲು ಚೀನಾ ಮೂಲದ ಹುವಾಯಿ ಸಂಸ್ಥೆಗೆ ದೆಹಲಿ ಈಗಾಗಲೇ ಅನುಮತಿ ನೀಡಿದೆ. ಭಾರತದಲ್ಲಿ 5 ಜಿ ನೆಟ್‌ವರ್ಕ್‌ಗಳನ್ನು ಕಾರ್ಯಗತಗೊಳಿಸಲು ಚೀನಾದ ಕಂಪನಿಗಳನ್ನು ನಿಜವಾಗಿಯೂ ಅಂತಿಮಗೊಳಿಸಲಾಗುತ್ತದೆಯೇ ಎಂದು ಕಾಯಬೇಕು. ಕುತೂಹಲದ ಸಂಗತಿ ಎಂದರೆ, ಉದ್ಯಮಿಗಳ ಭೇಟಿಯ ಸಂದರ್ಭದಲ್ಲಿ ‘5 ಜಿ ಪ್ರಯೋಗಗಳಿಗೆ ಒಂದೇ ಒಂದು ಚೀನೀ ಸಲಕರಣೆಗಳ ತಯಾರಕರನ್ನು ಬಳಸದ ವಿಶ್ವದ ಏಕೈಕ ನೆಟ್‌ವರ್ಕ್ ಮುಖೇಶ್ ಅಂಬಾನಿ ( ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ) ಒಡೆತನದ ರಿಲಯನ್ಸ್ ಜಿಯೋ’ ಎಂದು ಅಧ್ಯಕ್ಷ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ, ಆರ್ಥಿಕವಾಗಿ ಶಕ್ತಿಯುತವಾಗಿ ಇಲ್ಲದ ಮೂಲಸೌಕರ್ಯ ಯೋಜನೆಗಳನ್ನು ಚೀನಾ ಅನುಷ್ಠಾನ ಮಾಡಿದ್ದರಿಂದಾಗಿ ಏಷ್ಯಾದ ಅನೇಕ ದೇಶಗಳು ಸಾಲದ ಬಲೆಗೆ ಬಿದ್ದಿವೆ. ಇದರಿಂದಾಗಿ ಅವು ಬಾಹ್ಯ ಒತ್ತಡಕ್ಕೆ ತುತ್ತಾಗುತ್ತಿವೆ. ಅಂತಹ ಸವಾಲುಗಳನ್ನು ಎದುರಿಸಲು, ಭಾರತ – ಅಮೆರಿಕ ಜಂಟಿ ಹೇಳಿಕೆ ನೀಡಿದವು. ಆ ಹೇಳಿಕೆಯಲ್ಲಿ " ಜಾಗತಿಕ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತಮ - ಗುಣಮಟ್ಟದ ವಿಶ್ವಾಸಾರ್ಹ ಮಾನದಂಡಗಳನ್ನು ಉತ್ತೇಜಿಸಲು… ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಬ್ಲೂ ಡಾಟ್ ನೆಟ್ವರ್ಕಿನ ಪರಿಕಲ್ಪನೆಯತ್ತ ಆಸಕ್ತಿ ತೋರಿದ್ದಾರೆ ... " ಎಂದು ತಿಳಿಸಲಾಗಿದೆ. ಗುಣಮಟ್ಟ, ಪಾರದರ್ಶಕತೆ, ಆರ್ಥಿಕ ಕಾರ್ಯಸಾಧ್ಯತೆ ಮತ್ತು ಸುರಕ್ಷತೆಯಂತಹ ವಿವಿಧ ನಿಯತಾಂಕಗಳಲ್ಲಿ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯ ಯೋಜನೆಗಳನ್ನು ಬ್ಲೂ ಡಾಟ್ ನೆಟ್‌ವರ್ಕ್ ಪ್ರಮಾಣೀಕರಿಸುತ್ತದೆ. ಏಷ್ಯಾದ ವಿವಿಧ ದೇಶಗಳು ಮತ್ತು ಅದರಾಚೆ ಮೂಲಸೌಕರ್ಯ ಯೋಜನೆಗಳನ್ನು ಜಾರಿಗೆ ತರದಂತೆ ತಡೆಯಲು ಭಾರತ, ಅಮೆರಿಕ ಮತ್ತು ಇತರ ಸಮಾನ ಮನಸ್ಕ ದೇಶಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ತೋರುತ್ತದೆ.
ಟ್ರಂಪ್ ಭೇಟಿಯ ಹಲವು ಉತ್ತುಂಗಗಳ ನಡುವೆಯೂ, ತಾಲಿಬಾನ್ ಕುರಿತ ಅಮೆರಿಕದ ನೀತಿಯಿಂದಾಗಿ ಭಾರತದಲ್ಲಿ ಬಹಳಷ್ಟು ಆತಂಕ ಮನೆ ಮಾಡಿದೆ. ಅಮೆರಿಕ 19 ವರ್ಷಗಳಿಂದ ಆಫ್ಘಾನಿಸ್ತಾನದಲ್ಲಿ ನೆಲೆಯೂರಿದೆ ಮತ್ತು ಇನ್ನು ಮುಂದೆ ಆ ದೇಶದಲ್ಲಿ ಬೀಡು ಬಿಡುವ ಹಪಹಪಿ ಕಡಿಮೆ ಇದೆ. ದೆಹಲಿ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಟ್ರಂಪ್ ಸ್ಪಷ್ಟವಾಗಿ ಹೇಳಿದ್ದು, ಆಫ್ಘಾನಿಸ್ತಾನದಿಂದ ಹೊರಬರಲು ಅಮೆರಿಕ ಬಯಸಿದೆ. ಸುರಕ್ಷಿತ ನಿರ್ಗಮನಕ್ಕಾಗಿ ಅಮೆರಿಕ ತಾಲಿಬಾನ್ ಜೊತೆ ಸರಣಿ ಮಾತುಕತೆಗಳನ್ನು ನಡೆಸುತ್ತಿದೆ. ಆಫ್ಘಾನಿಸ್ತಾನದಿಂದ ಹಿಂದೆ ಸರಿಯಬೇಕು ಎಂಬ ಅಮೆರಿಕದ ಬಯಕೆ ಯಥೋಚಿತವಾದರೂ, ಉಳಿದ ಬೇಡಿಕೆಗಳ ಜೊತೆಗೆ ತಾಲಿಬಾನನ್ನು ಕಾನೂನುಬದ್ಧ ರಾಜಕೀಯ ಹುರಿಯಾಳನ್ನಾಗಿ ಮಾಡುವ ಪ್ರವೃತ್ತಿ ಕಳವಳಕಾರಿಯಾಗಿ ಇದೆ. ಕೆಲವು ದಿನಗಳ ಹಿಂದೆ ಅಮೆರಿಕ ಮತ್ತು ತಾಲಿಬಾನ್ "ವಾರದಲ್ಲಿ ಹಿಂಸಾಚಾರ ಕಡಿಮೆ ಮಾಡಲು" ಒಪ್ಪಿಕೊಂಡಿವೆ. ಈ ತಾತ್ಕಾಲಿಕ ಒಪ್ಪಂದ ಯಶಸ್ವಿಯಾದರೆ, ಅಮೆರಿಕ ವಾಪಸಾತಿಗೆ ಅನುಕೂಲ ಆಗುವಂತೆ ಇಬ್ಬರ ನಡುವೆ ಹೆಚ್ಚು ಪೂರ್ಣ ಪ್ರಮಾಣದ ಒಪ್ಪಂದ ಏರ್ಪಡಲಿದೆ ಎಂದು ವರದಿಗಳು ಸೂಚಿಸುತ್ತವೆ. ಆಫ್ಘಾನಿಸ್ತಾನದ ಪ್ರಬಲ ರಾಜಕೀಯ ಆಟಗಾರನನ್ನಾಗಿ ಪ್ರತಿಗಾಮಿ ಸಿದ್ಧಾಂತದ ತಾಲಿಬಾನ್ ಸಂಘಟನೆ ಪುನರುಜ್ಜೀವನಗೊಳ್ಳುವುದು ಭಾರತದ ಪಾಲಿಗೆ ಒಳಿತಿನ ಸಂಗತಿಯಲ್ಲ. ಭಾರತ ಕೂಡಲೇ ಮಧ್ಯ ಏಷ್ಯಾ ದೇಶಗಳು ಮತ್ತು ಆಫ್ಘಾನಿಸ್ತಾನದ ಇತರ ರಾಜಕೀಯ ಶಕ್ತಿಗಳೊಂದಿಗೆ ಸಂಬಂಧ ವೃದ್ಧಿಪಡಿಸಿಕೊಳ್ಳಬೇಕಿದೆ.
ಅಧ್ಯಕ್ಷ ಟ್ರಂಪ್ ಭೇಟಿಯನ್ನು ಸುಖಕರ ಸಂಗತಿ ಎಂದು ಬಿಂಬಿಸುವಾಗ, ಭಾರತ ಅಮೆರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿ 12 ವರ್ಷಗಳು ಉರುಳಿವೆ ಎಂಬುದನ್ನು ನಾವು ಗಮನಿಸಬೇಕು. ಆ ಸಮಯದಲ್ಲಿ, ಭಾರತ ತನ್ನ ಕಾರ್ಯತಂತ್ರದ ಬಗೆಗಿನ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತದೆ ಮತ್ತು ಈ ಒಪ್ಪಂದವು ಭಾರತದ ಪರಮಾಣು ಯೋಜನೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ಗಂಭೀರ ಆತಂಕಗಳು ಅನೇಕ ವಲಯಗಳಲ್ಲಿ ವ್ಯಕ್ತವಾದವು. ಈ ಯಾವುದೇ ಕಳವಳಗಳು ಕಾರ್ಯರೂಪಕ್ಕೆ ಬಂದಿಲ್ಲ. ದೊಡ್ಡ ಶಕ್ತಿಗಳೊಂದಿಗೆ ವ್ಯವಹರಿಸುವಾಗ ಸ್ವಲ್ಪ ಜಾಗರೂಕರಾಗಿ ಇರುವುದು ಸಹಜ. ಆದರೆ ನಮ್ಮ ಎಚ್ಚರಿಕೆ ಅನಿಯಂತ್ರಿತ ಆತಂಕವಾಗಿ ಬದಲಾಗಬಾರದು. ಹೀಗಾದಾಗ ಅದು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಉತ್ತೇಜಿಸುವ ಕಾನೂನುಬದ್ಧ ಕ್ರಮಗಳನ್ನು ತೆಗೆದುಕೊಳ್ಳಲು ಅಡ್ಡಿ ಆಗುತ್ತದೆ. ಇಲ್ಲಿಯವರೆಗೆ, ದೊಡ್ಡ ಶಕ್ತಿಗಳೊಂದಿಗೆ ವ್ಯವಹಾರ ಮಾಡುವಾಗ ಭಾರತೀಯ ನಾಯಕತ್ವ ಸಾಕಷ್ಟು ಧೈರ್ಯ ಮತ್ತು ಚತುರತೆ ಪ್ರದರ್ಶಿಸಿದೆ. ಭಾರತದ ವಿದೇಶಾಂಗ ನೀತಿ ವಿವೇಕಯುತ ನಡೆಗಳನ್ನು ಇರಿಸಿರುವುದಕ್ಕೆ ಅಧ್ಯಕ್ಷ ಟ್ರಂಪ್ ಅವರ ಇತ್ತೀಚಿನ ಭೇಟಿ ಸಾಕ್ಷಿ ಆಗಿದೆ.
ಸಂಜಯ್ ಪುಲಿಪಾಕ