ಡೆಹ್ರಾಡೂನ್: ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳಾಗಿವೆ. ಆದರೆ ಆಧುನಿಕ ಭಾರತದಲ್ಲಿ ಇಂದಿಗೂ ವಿದ್ಯುತ್ ಇಲ್ಲದ ಅನೇಕ ಪ್ರದೇಶಗಳಿವೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಹಳ್ಳಿಗಳರಷ್ಟೇ ಅಲ್ಲದೇ ಅನೇಕ ನಗರ ಪ್ರದೇಶಗಳ ಜನರು ಸಹ ವಿದ್ಯುತ್ ಇಲ್ಲದೇ ಪರದಾಡುತ್ತಿದ್ದರು. ಈ ಸಮಯದಲ್ಲಿ ಬ್ರಿಟಿಷರು ರೂಪಿಸಿದ 'ಗ್ಲೋಗಿ' ವಿದ್ಯುತ್ ಯೋಜನೆಯಿಂದ ಇಂದಿಗೂ ಪರ್ವತಗಳ ರಾಣಿಯಾದ ಡೆಹ್ರಾಡೂನ್ ಮತ್ತು ಮಸ್ಸೂರಿಗಳು ವಿದ್ಯುತ್ ಸಂಪರ್ಕ ಪಡೆಯುತ್ತಿವೆ.
ಇದು ದೇಶದ ಅತ್ಯಂತ ಹಳೆಯ ವಿದ್ಯುತ್ ಯೋಜನೆಯಾಗಿದ್ದು, ಇಂದಿಗೂ ಡೆಹ್ರಾಡೂನ್ ಮತ್ತು ಮಸ್ಸೂರಿಗೆ ವಿದ್ಯುತ್ ಪೂರೈಸುತ್ತದೆ. ಯೋಜನೆಯ ಕಾಮಗಾರಿಗಳನ್ನು 1890 ರ ದಶಕದಲ್ಲಿ ಮಸ್ಸೂರಿಯಲ್ಲಿ ಪ್ರಾರಂಭಿಸಲಾಯಿತು. ಬ್ರಿಟಿಷರು ಭಾರತದಲ್ಲಿ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆಗಾಗಿ ಮಸ್ಸೂರಿಯನ್ನು ಆಯ್ಕೆ ಮಾಡಿದರು. ಗ್ಲೋಗಿ ಪವರ್ ಹೌಸ್ ದೇಶದ ಇತಿಹಾಸ ಪುಟದಲ್ಲಿ ಸ್ಥಾನ ಪಡೆದಿದೆ.
ಈ ಜಲವಿದ್ಯುತ್ ಯೋಜನೆಗಾಗಿ ಸುಮಾರು 7.50 ಲಕ್ಷ ರೂ. ವೆಚ್ಚದಲ್ಲಿ ದೊಡ್ಡ ಜನರೇಟರ್‌ಗಳು ಮತ್ತು ಯಂತ್ರೋಪಕರಣಗಳನ್ನು ಡೂನ್ ವ್ಯಾಲಿಯಿಂದ ಗ್ಲೋಗಿಗೆ ಎತ್ತು ಬಂಡಿಗಳ ಮೂಲಕ ಸಾಗಿಸಲಾಯಿತು. ವೆಚ್ಚ ಮತ್ತು ಸಮಯವನ್ನು ಕಡಿತಗೊಳಿಸಲು ಸಾರಿಗೆಯನ್ನು ಡೆಹ್ರಾಡೂನ್-ಮಸ್ಸೂರಿ ಮೋಟಾರು ಮಾರ್ಗದಿಂದ ಮಾಡಲಾಯಿತು. ಆ ಸಮಯದಲ್ಲಿ ಇದು ಎತ್ತಿನ ಬಂಡಿಯ ಮಾರ್ಗವಾಗಿತ್ತು.
ಮೊದಲ ಬಾರಿಗೆ, ರೈಲು 1900 ರಲ್ಲಿ ಡೆಹ್ರಾಡೂನ್‌ಗೆ ತಲುಪಿತು. ಇದು ಯೋಜನೆಯನ್ನು ವೇಗಗೊಳಿಸಿತು. ಭಾರೀ ಯಂತ್ರಗಳು ಮತ್ತು ಟರ್ಬೈನ್‌ಗಳನ್ನು ಇಂಗ್ಲೆಂಡ್‌ನಿಂದ ಆಮದು ಮಾಡಿಕೊಂಡು ಹಡಗಿನ ಮೂಲಕ ಮುಂಬೈಗೆ ತಲುಪಿಸಲಾಯಿತು. ಇದನ್ನು ಡೆಹ್ರಾಡೂನ್‌ಗೆ ಸಾಗಿಸಲಾಯಿತು. ಈ ಯಂತ್ರಗಳನ್ನು ನಂತರ ಎತ್ತು ಬಂಡಿಗಳು ಮತ್ತು ಕಾರ್ಮಿಕರು ಬೆಟ್ಟದ ಕೆಳಗೆ ನೂರಾರು ಅಡಿಗಳಷ್ಟು ಗ್ಲೋಗಿ ಜಲವಿದ್ಯುತ್ ಹೌಸ್ ಕಾಮಗಾರಿ ನಡೆಯುತ್ತಿದ್ದ ಜಾಗಕ್ಕೆ ಸಾಗಿಸಿದರು.
1907 ರಲ್ಲಿ, ಕ್ಯಾರ್ಕುಲಿ ಮತ್ತು ಭಟ್ಟಾದ ಸಣ್ಣ ಕೊಳಗಳಿಂದ 16 ಇಂಚಿನ ಪೈಪ್ ಲೈನ್‌ಗಳಿಂದ ನೀರು ಹರಿಸಿ ಆ ಮೂಲಕ ಇಂಗ್ಲೆಂಡ್‌ನಿಂದ ತಂದ ದೈತ್ಯ ಟರ್ಬೈನ್ ಯಂತ್ರಗಳನ್ನು ಚಲಾಯಿಸಲು ಪ್ರಾರಂಭಿಸಲಾಯಿತು. ಮಸ್ಸೂರಿ ಮತ್ತು ಡೆಹ್ರಾಡೂನ್‌ನ ಮನೆಗಳಿಗೆ ವಿದ್ಯುತ್ ಸರಬರಾಜು ಆರಂಭಿಸಲಾಯಿತು.
ಗ್ಲೋಗಿ ಪವರ್ ಹೌಸ್‌ನ ಎರಡನೇ ವಿದ್ಯುತ್ ಕೇಂದ್ರವನ್ನು 9 ನವೆಂಬರ್ 1912 ರಂದು ಆರಂಭಿಸಲಾಯಿತು. 1920 ರ ಹೊತ್ತಿಗೆ, ಮಸ್ಸೂರಿಯ ಹೆಚ್ಚಿನ ಬಂಗಲೆಗಳು, ಹೋಟೆಲ್‌ಗಳು ಮತ್ತು ಶಾಲೆಗಳಲ್ಲಿ ಹಿಂದೆ ಬಳಸುತ್ತಿದ್ದ ತೈಲ ದೀಪಗಳ ಜಾಗವನ್ನು ವಿದ್ಯುತ್ ಬಲ್ಬ್‌ಗಳು ಪಡೆದವು. ಮಸ್ಸೂರಿ ಪುರಸಭೆಯು 70 ವರ್ಷಗಳ ಕಾಲ ಗ್ಲೋಗಿ ವಿದ್ಯುತ್ ಸ್ಥಾವರದ ಮಾಲೀಕರಾಗಿದ್ದರು.
ಡೆಹ್ರಾಡೂನ್ ಮತ್ತು ಮಸ್ಸೂರಿ ನಗರಗಳಲ್ಲಿ ಬಳಸುತ್ತಿದ್ದ ವಿದ್ಯುಚ್ಛಕ್ತಿಯಿಂದ ಬಂದ ಆದಾಯದಿಂದಾಗಿ ಮಸ್ಸೂರಿ ಪುರಸಭೆಯನ್ನು ಒಮ್ಮೆ ಉತ್ತರ ಪ್ರದೇಶದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆ ಎಂದು ಪರಿಗಣಿಸಲಾಗಿತ್ತು.1976 ರಲ್ಲಿ, ಉತ್ತರ ಪ್ರದೇಶ ವಿದ್ಯುತ್ ಮಂಡಳಿಯು ಪವರ್ ಹೌಸ್ ಸೇರಿದಂತೆ ಪುರಸಭೆಯ ಎಲ್ಲಾ ವಿದ್ಯುತ್ ಉದ್ಯಮಗಳನ್ನು ಸ್ವಾಧೀನಪಡಿಸಿಕೊಂಡಿತು.
ಜಲವಿದ್ಯುತ್ ಸ್ಥಾವರವು ಕಳೆದ 35 ವರ್ಷಗಳಲ್ಲಿ ಅನೇಕ ಏರಿಳಿತಗಳನ್ನು ಕಂಡಿದೆ. ಕಳೆದ ದಶಕಗಳಲ್ಲಿ, ಹಳೆಯ ತಂತ್ರಜ್ಞರು ನಿವೃತ್ತರಾದರು. ಗ್ಲೋಗಿ ಪವರ್‌ಹೌಸ್‌ನ ಶತಮಾನದಷ್ಟು ಹಳೆಯದಾದ ಟರ್ಬೈನ್‌ಗಳು ಮತ್ತು ಯಂತ್ರೋಪಕರಣಗಳನ್ನು ಹೇಗೆ ದುರಸ್ತಿ ಮಾಡುವುದು ಮತ್ತು ನಿರ್ವಹಿಸುವುದು ಎಂಬ ಜ್ಞಾನ ಅವರಿಗೆ ಇತ್ತು. ವಾಸ್ತವವಾಗಿ, ಪವರ್ ಹೌಸ್ನಲ್ಲಿ ಸ್ಥಾಪಿಸಲಾದ ಮೂಲ ವಿದೇಶಿ ಯಂತ್ರಗಳು ಹಳೆಯ ತಂತ್ರಜ್ಞಾನವನ್ನು ಹೊಂದಿವೆ ಮತ್ತು ಇವುಗಳನ್ನು ಇನ್ನು ಮುಂದೆ ತಯಾರಿಸಲಾಗುವುದಿಲ್ಲ.
ಸದ್ಯ ಉತ್ತರಾಖಂಡ ಜಲ ವಿದ್ಯುತ್ ನಿಗಮ ಈ ವಿದ್ಯುತ್ ಸ್ಥಾವರವನ್ನು ನಿಯಂತ್ರಿಸುತ್ತದೆ. ಈ ಐತಿಹಾಸಿಕ ಪಾರಂಪರಿಕ ವಿದ್ಯುತ್ ಸ್ಥಾವರ ನವೀಕರಣ, ಆಧುನೀಕರಣ ಮತ್ತು ಉನ್ನತೀಕರಣದ ಕಾರ್ಯಗಳು ಪ್ರಸ್ತುತ ನಡೆಯುತ್ತಿವೆ. 113 ವರ್ಷಗಳಷ್ಟು ಹಳೆಯದಾದ ಈ ವಿದ್ಯುತ್ ಸ್ಥಾವರವು ವಿದ್ಯುತ್ ಕ್ಷೇತ್ರದಲ್ಲಿ ಭಾರತದ ಪ್ರಗತಿಯ ಅದ್ಭುತ ತಾಂತ್ರಿಕ ಇತಿಹಾಸವನ್ನು ಪ್ರತಿನಿಧಿಸುತ್ತದೆ.