ನವದೆಹಲಿ: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸುಮಾರು ಎರಡೂವರೆ ತಿಂಗಳಿಂದ ಬಾಗಿಲು ಮುಚ್ಚಿದ್ದ ದೇವಾಲಯಗಳು, ಮಸೀದಿಗಳು, ಧಾರ್ಮಿಕ ಕೇಂದ್ರಗಳು ಸರ್ಕಾರದ ಮಾರ್ಗಸೂಚಿಯಂತೆ ಇದೇ 8 ರಂದು ಬಾಗಿಲು ತೆರೆಯಲಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗ್ತಿದೆ.
ದೇವಾಲಯಗಳನ್ನು ತೆರೆಯಲು ಸರ್ಕಾರ ಒಪ್ಪಿಗೆ ನೀಡಿದ ತರುವಾಯ ಮೊರಾದಾಬಾದ್ನ ಚಾಮುಂಡ ದೇವಸ್ಥಾನದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲು ತಯಾರಿ ನಡೆಸಲಾಗಿದೆ. ಭಕ್ತರು ಮಾಸ್ಕ್ ಧರಿಸಿಕೊಂಡೇ ಆಗಮಿಸಬೇಕು. ನಂತರ ದೇವಾಲಯದಲ್ಲಿ ಅಂತರ ಕಾಯ್ದುಕೊಳ್ಳಬೇಕು ಹಾಗೂ ದೇವಾಲಯದ ಮೂರ್ತಿಗಳನ್ನು ಮುಟ್ಟುವಂತಿಲ್ಲ ಎಂದು ಅರ್ಚಕರೊಬ್ಬರು ಮಾಹಿತಿ ನೀಡಿದ್ದಾರೆ.
![temple authorities are preparing for June 8](https://etvbharatimages.akamaized.net/etvbharat/prod-images/7484373_ourad.png)
ಪಂಜಾಬ್ನ ಅಮೃತಸರದ ದೇವಾಲಯಗಳು ಕೂಡ ಬಾಗಿಲು ತೆರೆಯಲು ಸಜ್ಜಾಗುತ್ತಿವೆ. ಎಲ್ಲಾ ದೇವಾಲಯಗಳಿಗೂ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗ್ತಿದೆ.
![temple authorities are preparing for June 8](https://etvbharatimages.akamaized.net/etvbharat/prod-images/7484373_punjab.jpg)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ದೇವಾಲಯದ ವಿಗ್ರಹಗಳು, ಪವಿತ್ರ ಪುಸ್ತಕಗಳನ್ನು ಮುಟ್ಟದಂತೆ ಕ್ರಮ ಕೈಗೊಳ್ಳಲಾಗಿದೆ. ಗಾಯಕರು ಅಥವಾ ಭಜನೆ ನಡೆಸಲು ಅನುಮತಿ ಇಲ್ಲ ಮತ್ತು ತೀರ್ಥ ಪ್ರಸಾದ ವಿನಿಯೋಗ ಅನುಮತಿಸಲಾಗುವುದಿಲ್ಲ ಎಂದು ದೇವಾಲಯಗಳ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಮಸೀದಿ ತೆರೆಯಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಮಸೀದಿಗಳಲ್ಲಿ ಕೂಡ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗ್ತಿದೆ. ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಮಸೀದಿಯ ಗೋಡೆಗಳಲ್ಲಿ ಪೋಸ್ಟರ್ ಅಂಟಿಸಲಾಗುತ್ತಿದೆ ಎಂದು ಮಸೀದಿಯ ಕಮಿಟಿ ಹೇಳಿದೆ.
![temple authorities are preparing for June 8](https://etvbharatimages.akamaized.net/etvbharat/prod-images/7484373_majid.jpg)
ನವದೆಹಲಿಯ ಹನುಮಾನ್ ದೇವಾಲಯದಲ್ಲಿ ಈಗಾಗಲೇ ಸ್ಯಾನಿಟೈಸೇಶನ್ ಟನಲ್ ನಿರ್ಮಿಸಿದ್ದು, ದೇವಾಲಯಕ್ಕೆ ಆಗಮಿಸುವ ಪ್ರತಿಯೊಬ್ಬರೂ ಅದರ ಮೂಲಕವೇ ದೇವಾಲಯಕ್ಕೆ ಪ್ರವೇಶಿಸಬೇಕು ಎಂದು ತಿಳಿಸಿದೆ. ಜೊತೆಗೆ ಏಕಕಾಲದಲ್ಲಿ 5-10 ಭಕ್ತರು ದೇವಾಲಯ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ದೇವಾಲಯದ ಆಡಳಿತವರ್ಗ ಪ್ರಕಟಣೆಯಲ್ಲಿ ಸೂಚಿಸಿದೆ.
![temple authorities are preparing for June 8](https://etvbharatimages.akamaized.net/etvbharat/prod-images/7484373_delhi.jpg)
ಆದರೆ ಭೋಪಾಲ್ ಮಾ ವೈಷ್ಣವಧಂ ನವ ದುರ್ಗಾ ದೇವಾಲಯದ ಆಡಳಿತ ವರ್ಗವು ಸರ್ಕಾರದ ಮಾರ್ಗಸೂಚಿ ಅನ್ವಯ ದೇವಾಲಯಗಳಲ್ಲಿ ಸ್ಯಾನಿಟೈಜರ್ ಬಳಕೆಗೆ ವಿರೋಧ ವ್ಯಕ್ತಪಡಿಸಿದೆ. ಸ್ಯಾನಿಟೈಜರ್ ಆಲ್ಕೋಹಾಲ್ ಕಂಟೆಂಟ್ ಹೊಂದಿರುವ ಕಾರಣ ದೇವಾಲಯಗಳಲ್ಲಿ ಅದನ್ನು ಬಳಸಲು ನಾವು ಸಮ್ಮತಿಸುವುದಿಲ್ಲ ಎಂದು ತಿಳಿಸಿದೆ.