ತೂತುಕುಡಿ(ತಮಿಳುನಾಡು): 25 ವರ್ಷದ ಆಟೋ ಚಾಲಕ ತಿರುನೆಲ್ವೇಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿ ದೈಹಿಕ ಹಿಂಸೆ ನೀಡಿದ್ದೇ ಮಗನ ಸಾವಿಗೆ ಕಾರಣ ಎಂದು ತಂದೆ ಆರೋಪಸಿದ್ದು, ಹೊಸ ವಿವಾದ ಸೃಷ್ಠಿಯಾಗಿದೆ.
ಮೃತ ಯುವಕ ಎನ್ ಕುಮಾರೇಸನ್ ಅವರ ತಂದೆ, ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ತಮ್ಮ ಮಗನನ್ನು ಅಮಾನುಷವಾಗಿ ಹಿಂಸಿಸಿ ಥಳಿಸಿದ್ದರಿಂದ ಮಗ ಸಾವಿಗೀಡಾಗಿದ್ದಾನೆ ಎಂದು ಆರೋಪಿಸಿದ್ದಾರೆ. ಜಯರಾಜ್ ಮತ್ತು ಅವರ ಮಗ ಬೆನ್ನಿಕ್ ಪೊಲೀಸ್ ಸಕಸ್ಟಡಿಯಲ್ಲಿ ಸಾವಿಗೀಡಾದ ಸುದ್ದಿ ರಾಷ್ಟ್ರವ್ಯಾಪಿ ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಇನ್ನೊಂದು ಘಟನೆ ನಡೆದಿದೆ ಎನ್ನಲಾಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ವರದಿಗಳ ಪ್ರಕಾರ, ಎನ್ ಕುಮಾರೇಸನ್ ಅವರನ್ನು ಸುಮಾರು ಹದಿನೈದು ದಿನಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ವರದಿಗಳು ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆದಿದೆ ಎಂದು ತಿಳಿಸಿವೆ. ಅವರ ದೇಹದ ಮೇಲೆ ಅನೇಕ ಗಾಯಗಳಾಗಿವೆ ಎಂದು ವರದಿ ಸೂಚಿಸುತ್ತದೆ.
ಭೂ ವಿವಾದ ಪ್ರಕರಣದ ವಿಚಾರಣೆಗಾಗಿ ಎನ್ ಕುಮಾರೇಸನ್ ಅವರನ್ನು ಮೇ 8 ರಂದು ತೆಂಕಸಿ ಪೊಲೀಸ್ ಠಾಣೆಗೆ ಕರೆಸಲಾಯಿತು. ಅದೇ ಏರಿಯಾದ ನಿವಾಸಿ ಸೆಂಥಿಲ್ ಅವರು ಯುವಕನ ವಿರುದ್ಧ ದೂರು ನೀಡಿರುತ್ತಾರೆ. ಯವಕನ ಕಪಾಳಕ್ಕೆ ಹೊಡೆದಿದ್ದ ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ್, ಎರಡು ದಿನಗಳ ನಂತರ ಮತ್ತೆ ಠಾಣೆಗೆ ಕರೆಸಿರುತ್ತಾರೆ.
ವಿಚಾರಣೆ ಪ್ರಕ್ರಿಯೆಯಲ್ಲಿ, ಆಟೋ ಚಾಲಕನನ್ನು ಪೊಲೀಸರು ಕ್ರೂರವಾಗಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕುಮಾರೆಸನ್ ದೈಹಿಕ ಹಿಂಸೆಗೆ ಒಳಗಾಗಿದ್ದಾನೆ ಮತ್ತು ಪೊಲೀಸರು ಅವನಿಗೆ ಲಾಠಿಗಳಿಂದ ಹೊಡೆದ್ದು, ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಘಟನೆಯ ಬಗ್ಗೆ ಯಾರಿಗಾದರು ತಿಳಿಸಿದ್ರೆ ತಂದೆಗೆ ಹಿಂಸೆ ನೀಡುವುದಾಗಿ ಪೊಲೀಸರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಕೆಲವು ದಿನಗಳ ನಂತರ ಯುವಕನ ಆರೋಗ್ಯವು ಹದಗೆಟ್ಟಿದೆ. ಕುಟುಂಬ ಸದಸ್ಯರು ಜೂನ್ 12 ರಂದು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಕಿಡ್ನಿ ಮತ್ತು ಲಿವರ್ಗೆ ಹಾನಿಯಾಗಿದೆ ಎಂದು ವೈದ್ಯರು ತಿಳಿಸಿದಾಗ ಪೊಲೀಸರ ದೈರ್ಜನ್ಯದ ಬಗ್ಗೆ ಯುವಕ ಬಾಯ್ಬಿಟ್ಟಿದ್ದಾನೆ. ಅಂದಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಶನಿವಾರ ಕೊನೆಯುಸಿರೆಳೆದಿದ್ದಾನೆ. ಈ ಘಟನೆ ಸ್ಥಳೀಯರಲ್ಲಿ ಮತ್ತೊಮ್ಮೆ ಭೀತಿ ಹುಟ್ಟಿಸಿದ್ದು, ಪೊಲೀಸರ ದೌರ್ಜನ್ಯದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.