ನವದೆಹಲಿ: ವಿವಾದಿತ ರಾಮ ಮಂದಿರ-ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ತೀರ್ಪು ಇಂದು ಸುಪ್ರೀಂಕೋರ್ಟ್ನಿಂದ ಹೊರಬೀಳಲಿದೆ.
ಇಂದು ಬೆಳಗ್ಗೆ 10:30ಕ್ಕೆ ಸುಪ್ರೀಂಕೋರ್ಟ್ನಿಂದ ಮಹತ್ವದ ತೀರ್ಪು ಹೊರಬೀಳಲಿದ್ದು, ಈಗಾಗಲೇ ದೇಶದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಸಿಜೆಐ ರಂಜನ್ ಗೊಗೊಯಿ ನೇತೃತ್ವದ ಪೀಠದಿಂದ ಈ ಮಹತ್ವದ ತೀರ್ಪು ಹೊರಬೀಳಲಿರುವ ಕಾರಣ, 7 ದಶಕಕ್ಕೂ ಹೆಚ್ಚು ಕಾಲದಿಂದ ಇರುವ ವಿವಾದಕ್ಕೆ ನಾಳೆ ತೆರೆ ಬೀಳಲಿದೆ.
ಈಗಾಗಲೇ ಅಯೋಧ್ಯೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 4000 ಹೆಚ್ಚುವರಿ ಅರೆಸೇನಾಪಡೆಗಳನ್ನು ರವಾನಿಸಲಾಗಿದೆ. ಅಲ್ಲದೆ ಸಿಆರ್‌ಪಿಎಫ್, ಕಮಾಂಡೋ ಪಡೆಗಳನ್ನು ಸಹ ನಿಯೋಜಿಸಲಾಗಿದೆ. ಅಂಬೇಡ್ಕರ್ ನಗರದ (ಅಕ್ಬರ್‌ಪುರ್, ಟಾನ್ ಡಾ. ಜಲಾಲ್‌ಪುರ್, ಜೈಟ್ ಪುರ್, ಭಿಟಿ ಮತ್ತು ಅಲ್ಲಾಪುರ್) ವಿವಿಧ ಕಾಲೇಜುಗಳಲ್ಲಿ 8 ತಾತ್ಕಾಲಿಕ ಜೈಲುಗಳನ್ನು ಸ್ಥಾಪನೆ ಮಾಡಲಾಗಿದೆ. ಮೂಲಭೂತ ವ್ಯವಸ್ಥೆ ಕಲ್ಪಿಸುವಂತೆ ಕಾಲೇಜುಗಳಿಗೆ ಸೂಚಿಸಲಾಗಿದೆ.
ಏನಿದು ಪ್ರಕರಣ?:
ಅಯೋಧ್ಯೆ ಬಾಬ್ರಿ ಮಸೀದಿ ಇದ್ದ ಜಾಗದ 2.77 ಎಕರೆ ವಿವಾದಿತ ಭೂಮಿ ಯಾರಿಗೆ ಸೇರಿದ್ದು ಎಂಬುದೇ ಈಗ ಈ ಪ್ರಕರಣದ ಕೇಂದ್ರ ಬಿಂದು. ಬಾಬ್ರಿ ಮಸೀದಿ ಕಟ್ಟುವ ಮುಂಚೆ ಈ ಜಾಗದಲ್ಲಿ ರಾಮನ ದೇವಸ್ಥಾನವಿತ್ತು ಎಂಬುದು ಹಿಂದೂಗಳ ವಾದ. ಬಾಬ್ರಿ ಮಸೀದಿ ಇಡೀ ಜಾಗ ತಮಗೆ ಸೇರಿದ್ದು ಎಂಬುದು ಸುನ್ನಿ ವಕ್ಫ್ ಮಂಡಳಿಯ ವಾದ. ಹಾಗೆಯೇ ನಿರ್ಮೋಹಿ ಅಖಾಡ ಕೂಡ ಇದು ತನಗೆ ಸೇರಿದ್ದೆಂದು ಹೇಳುತ್ತಿದೆ.