ನವದೆಹಲಿ : ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಸಂಘರ್ಷ ಸುಪ್ರೀಂಕೋರ್ಟ್ನಲ್ಲಿಂದು ಬಿಸಿಬಿಸಿ ವಾದ-ಪ್ರತಿವಾದಕ್ಕೆ ಎಡೆ ಮಾಡಿಕೊಟ್ಟಿತು.
ಕರ್ನಾಟಕದ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ಸಿಜೆಐ ರಂಜನ್ ಗೊಗೊಯಿ, ಮೊದಲಿಗೆ ಸ್ಪೀಕರ್ ಅವರಿಗೆ ಪ್ರಶ್ನೆಗಳ ಸುರಿಮಳೆಗೈದರು. ನಿನ್ನೆ ತಮ್ಮ ಆದೇಶದ ವಿರುದ್ಧ ಅರ್ಜಿ ಸಲ್ಲಿಸಿದ್ದ ಸ್ಪೀಕರ್ ನಡೆ ಪ್ರಶ್ನಿಸಿದ ಸಿಜೆಐ ನಿಮ್ಮ ಪ್ರಕ್ರಿಯೆಯಲ್ಲಿ ಸುಪ್ರೀಂ ಮಧ್ಯ ಪ್ರವೇಶಕ್ಕೆ ನೀವು ಇಚ್ಛಿಸುವುದಿಲ್ಲವೇ? ನೀವು ಸುಪ್ರೀಂ ಆದೇಶವನ್ನೇ ಪ್ರಶ್ನಿಸುತ್ತಿದ್ದೀರಾ? ಎಂದು ಸ್ಪೀಕರ್ ಪರ ವಕೀಲ್ ಅಭಿಷೇಕ್ ಮನು ಸಿಂಘ್ವಿ ಮೇಲೆ ಪ್ರಶ್ನೆಗಳ ಸರಮಾಲೆಯನ್ನೇ ಎಸೆದರು.
ಇದಕ್ಕೆ ಉತ್ತರಿದ ಸಿಂಘ್ವಿ, ನಾನು ಹಾಗೂ ಸ್ಪೀಕರ್ ಸಹ ಸಂವಿಧಾನದ ಪ್ರಕ್ರಿಗೆಳ ಒಂದು ಭಾಗ. ಸ್ಪೀಕರ್ ಕ್ವಾಸಿ ಜ್ಯುಡಿಷರಿ ವ್ಯಾಪ್ತಿಗೆ ಬರುತ್ತಾರೆ ಎನ್ನುವ ಮೂಲಕ ನಿನ್ನೆ ಸ್ಪೀಕರ್ ರಮೇಶ್ ತೆಗೆದುಕೊಂಡಿರುವ ನಡೆಯನ್ನು ಸಮರ್ಥಿಸಿಕೊಂಡರು.
ಇದೇ ವೇಳೆ ಅತೃಪ್ತ ಶಾಸಕರ ಪರ ವಾದ ಮಂಡಿಸಿದ ವಕೀಲ್ ಮುಕುಲ್ ರೋಹ್ಟಗಿ, ಕರ್ನಾಟಕದ ವಿಧಾನಸಭಾಧ್ಯಕ್ಷ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಮಾಡಿದರು. ಇಂತಹ ಬೆಳವಣೆಗೆಗಳನ್ನು ಸುಪ್ರೀಂ ಕೋರ್ಟ್ ಅಲ್ಲದೇ ಮತ್ಯಾರು ಪ್ರಶ್ನಿಸಬೇಕು? ನ್ಯಾಯಾಲಯ ಮಾತ್ರ ಸ್ಪೀಕರ್ ಕ್ರಮವನ್ನು ಪ್ರಶ್ನಿಸಬಹುದು ಎಂದು ರಮೇಶ್ ಕುಮಾರ್ ಅವರ ನಡೆಯನ್ನು ಸಿಜೆಐ ಗಮನಕ್ಕೆ ತಂದರು.
ಇನ್ನು ನಿನ್ನೆ ಸಂಜೆ 6 ಗಂಟೆಯೊಳಗೆ ಸ್ಪೀಕರ್ ಎದುರು ಹಾಜರಾಗಿ ರಾಜೀನಾಮೆ ಸಲ್ಲಿಸುವಂತೆ ಅತೃಪ್ತ ಶಾಸಕರಿಗೆ ಸೂಚಿಸಿದ್ದ ಸುಪ್ರೀಂ ಕೋರ್ಟ್, ಅಂಗೀಕಾರ/ನಿರಾಕರಣೆಯ ಕುರಿತು ನಿನ್ನೆಯೇ ತೀರ್ಮಾನ ತೆಗೆದುಕೊಳ್ಳುವುದು ಒಳಿತು ಎಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸ್ಪೀಕರ್, ರಾಜೀನಾಮೆ ಅರ್ಜಿಗಳ ಪರಾಮರ್ಶೆಗೆ ಸಮಯ ಬೇಕು. ಬಾಕಿ ಇರುವ ಹಿಂದಿನ ಅನರ್ಹತೆಯ ಅರ್ಜಿಗಳನ್ನೂ ಮೊದಲು ಪರಿಶೀಲಿಸಬೇಕು. ಸ್ಪೀಕರ್ಗೆ ಗಡುವು ನೀಡಲು ಸುಪ್ರೀಂ ಕೋರ್ಟ್ಗೆ ಅವಕಾಶವಿದೆಯೇ ಎಂದು ಪ್ರಶ್ನಿಸಿದ್ದರು.