ನವದೆಹಲಿ: ದೇಶದಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿ, ಆರ್ಥಿಕ ಸ್ಥಿತಿ ಹಾಗೂ ಕೋವಿಡ್-19 ವಿಷಯಕ್ಕೆ ಸಂಬಂಧಿಸಿದಂತೆ ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಕಾಂಗ್ರೆಸ್ನ ಲೋಕಸಭಾ ಸಂಸದರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.
ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಿ ಮಾಹಿತಿ ಪಡೆದುಕೊಳ್ಳಲಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಭಾರತ-ಚೀನಾ ಗಡಿಯಲ್ಲಿನ ಬಿಕ್ಕಟ್ಟಿನ ವಿಚಾರವಾಗಿ ಕೂಡ ಚರ್ಚೆ ನಡೆಸುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದು ಬಂದಿದೆ.
ಕೋವಿಡ್-19 ಹಾಗೂ ಚೀನಾ-ಭಾರತ ಸಂಘರ್ಷದ ವಿಚಾರವಾಗಿ ಈಗಾಗಲೇ ಸೋನಿಯಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅನೇಕ ಸಲ ಪತ್ರ ಬರೆದಿದ್ದು, ಇಂದಿನ ವಿಡಿಯೋ ಕಾನ್ಫರೆನ್ಸ್ನಲ್ಲಿ ಈ ಎಲ್ಲ ವಿಚಾರವಾಗಿ ಮಾತುಕತೆ ನಡೆಸಲಿದ್ದಾರೆ.
ಸೋನಿಯಾ ಗಾಂಧಿ ನೇತೃತ್ವದ ಗಾಂಧಿ ಟ್ರಸ್ಟ್ಗಳಿಗೆ ಚೀನಾದಿಂದ ದೇಣಿಗೆ ಸಿಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ತನಿಖೆ ನಡೆಸಲು ಮುಂದಾಗಿದ್ದು, ಇಂದಿನ ವಿಡಿಯೋ ಸಂವಾದದ ವೇಳೆ ಇದರ ಕುರಿತು ಪ್ರಸ್ತಾಪವಾಗುವ ಸಾಧ್ಯತೆ ಇದೆ.