ನವದೆಹಲಿ: ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವೆಂಟಿಲೇಟರ್ ಮೂಲಕ ಉಸಿರಾಟ ನಡೆಸುತ್ತಿದ್ದರೂ, ಉಸಿರಾಟ ಪ್ರಕ್ರಿಯೆಯಲ್ಲಿ ಸ್ವಲ್ಪಮಟ್ಟಿನ ಸುಧಾರಣೆ ಕಂಡು ಬಂದಿದೆ ಎಂದು ನವದೆಹಲಿಯ ಸೇನಾ ಸಂಶೋಧನಾ ಮತ್ತು ರೆಫೆರಲ್ ಆಸ್ಪತ್ರೆ ಮಾಹಿತಿ ನೀಡಿದೆ.
ಅಲ್ಲದೇ ಮುಖರ್ಜಿ ಚೇತರಿಸಿಕೊಳ್ಳುತ್ತಿದ್ದು, ಅವರ ಮೇಲೆ ತಜ್ಞ ವೈದ್ಯರ ತಂಡ ಗಮನವಿಟ್ಟಿದೆ ಎಂದು ತಿಳಿಸಿದ್ದಾರೆ. ‘ಪ್ರಣಬ್ ಮುಖರ್ಜಿ ಅವರಿಗೆ ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಉಸಿರಾಟ ವ್ಯವಸ್ಥೆಯಲ್ಲಿ ಸುಧಾರಣೆಯಾಗುತ್ತಿದೆ. ಈ ವೇಳೆ, ತಜ್ಞರ ತಂಡ ಮುಖರ್ಜಿ ಆರೋಗ್ಯ ಕುರಿತಂತೆ ನಿಗಾವಹಿಸಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಮುಖರ್ಜಿಯ ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿದ್ದ ಶ್ವಾಸಕೋಶ ಸೋಂಕಿನ ಸಂಬಂಧ ಚಿಕಿತ್ಸೆ ನೀಡಿದ್ದು, ಸುಧಾರಣೆಗೊಂಡಿದೆ ಎಂದಿದ್ದಾರೆ.
ಪ್ರಣಬ್ ಮುಖರ್ಜಿ ಅವರನ್ನು ಆ. 10ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೆದುಳಿನಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ತೆಗೆದು ಹಾಕಲು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಜೊತೆಗೆ ಕೊರೊನಾ ಪಾಸಿಟಿವ್ ಕೂಡ ದೃಢಪಟ್ಟಿತ್ತು.