ಇಂಫಾಲ್: ಮಣಿಪುರ ಮುಖ್ಯಮಂತ್ರಿ ಬೀರೆನ್ ಸಿಂಗ್, ಸೋಮವಾರ ವಿಶ್ವಾಸಮತ ಯಾಚನೆಯಲ್ಲಿ ಗೆಲ್ಲುವ ಮೂಲಕ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಕುರ್ಚಿಯನ್ನು ಗಟ್ಟಿಗೊಳಿಸಿದ್ದಾರೆ. ಇದಾದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ಗೆ ಮತ್ತೆ ಶಾಕ್ ಎದುರಾಗಿದೆ.
ಮೂವರು ಶಾಸಕರ ರಾಜೀನಾಮೆ ಮತ್ತು ಪಕ್ಷಾಂತರ ವಿರೋಧಿ ಕಾನೂನಿನಡಿ ನಾಲ್ಕು ಸದಸ್ಯರು ಅನರ್ಹಗೊಂಡ ನಂತರ ನಿನ್ನೆ ಸಂಜೆ ಮಣಿಪುರ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ನಡೆದಿತ್ತು. ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ವಿಶ್ವಾಸ ಮತಯಾಚನೆಯಲ್ಲಿ ವಿಜಯಿಯಾಗಿದ್ದರು.
ನಿನ್ನೆ ಬಿರೇನ್ ಸಿಂಗ್ ವಿಶ್ವಾಸ ಮತಯಾಚನೆಯಲ್ಲಿ ಗೆಲ್ಲಲು ಕಾಂಗ್ರೆಸ್ನ 8 ಶಾಸಕರು ಪ್ರಮುಖ ಪಾತ್ರ ವಹಿಸಿದ್ದರು. ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಕಾಂಗ್ರೆಸ್ ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸಿದ್ದರೂ, 8 ಶಾಸಕರು ಸದನದಲ್ಲಿ ಹಾಜರಿರಲಿಲ್ಲ. ಇದು ಬಿಜೆಪಿ ಸರ್ಕಾರ ವಿಶ್ವಾಸ ಮತಯಾಚನೆ ಗೆಲ್ಲಲು ಸಹಕಾರಿಯಾಗಿತ್ತು. ಇವರೇ ಬಿರೇನ್ ಸಿಂಗ್ ಅವರನ್ನು ಉಳಿಸಿಕೊಳ್ಳಲು ಸಹಾಯ ಮಾಡಿದ್ದರು. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸ್ಥಿರವಾಗಿದೆ.
ಇದಾದ ರಾತ್ರಿ ಬೆಳಗಾಗುವುದರೊಳಗೆ ಮಣಿಪುರ ಕಾಂಗ್ರೆಸ್ನ ಆರು ಜನ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ರಾಜೀನಾಮೆ ನೀಡಿದ ಶಾಸಕ ಒ ಹೆನ್ರಿ ಸಿಂಗ್ ಹೇಳಿದ್ದಾರೆ. ಇವರೊಂದಿಗೆ ಓನಮ್ ಲುಖೋಯ್, ಅಬ್ದುಲ್ ನಾಸಿರ್, ಪೌನಮ್ ಬ್ರೋಜೆನ್, ಎನ್‌ಗಮ್‌ಥಾಂಗ್ ಹಾಕಿಪ್ ಮತ್ತು ಗಿನ್ಸುವಾನ್ಹೌ ಕುಡಾ ರಾಜೀನಾಮೆ ಸಲ್ಲಿಸಿದ್ದಾರೆ.