ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ನಡೆಯುತ್ತಿದ್ದ ವೇಳೆ ಸಿಖ್ ಧರ್ಮದ ತಂದೆ ಮತ್ತು ಮಗ 70 ಜನ ಮುಸ್ಲಿಮರನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಮೊಹಿಂದರ್ ಸಿಂಗ್ ಎಂಬ ವ್ಯಕ್ತಿ ತನ್ನ ಮಗನ ಸಹಾಯದೊಂದಿಗೆ ಮುಸ್ಲಿಂ ಸಮುದಾಯದ ಜನರನ್ನು ದ್ವಿಚಕ್ರ ವಾಹನದಲ್ಲಿ ಗೋಕುಲ್ಪುರಿ ಮಾರುಕಟ್ಟೆ ಪ್ರದೇಶದಿಂದ ಸುರಕ್ಷಿತವಾಗಿ ಕಾರ್ಡಂಪುರಿಗೆ ತಲುಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, 'ಗಲಭೆ ವೇಳೆ ನಾನು ಸ್ಕೂಟರ್ ಮೂಲಕ ಮತ್ತು ನನ್ನ ಮಗ ಬುಲೆಟ್ ಬೈಕ್ನಲ್ಲಿ ಗೋಕುಲ್ಪುರಿ ಮಾರುಕಟ್ಟೆ ಪ್ರದೇಶದಿಂದ ಕಾರ್ಡಂಪುರಿಗೆ 20 ಬಾರಿ ಹೋಗಿ ಬಂದಿದ್ದು, ಸುಮಾರು 60 ರಿಂದ 70 ಜನರನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದೆವು. ಮೊದಲು ಮಹಿಳೆಯರು ಮತ್ತು ಮಕ್ಕಳನ್ನು ಸ್ಥಳಾಂತರಿಸಿದೆವು. ಮುಸ್ಲಿಂ ವ್ಯಕ್ತಿಗಳ ತಲೆಗೆ ಪೇಟ ಸುತ್ತಿ, ಗುರುತು ಪತ್ತೆಯಾಗದಂತೆ ಮಾಡಿ ಈ ಕೆಲ್ಸ ಮಾಡಿದೆವು' ಎಂದವರು ತಿಳಿಸಿದರು.
'ಧರ್ಮದ ಆಧಾರದಲ್ಲಿ ನಾವು ಅವರನ್ನು ನೋಡಲಿಲ್ಲ. ಮಾನವೀಯತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಕೆಲಸ ಮಾಡಿದ್ವಿ' ಎಂದು ಮೊಹಿಂದರ್ ಸಿಂಗ್ ಹೇಳಿದ್ದಾರೆ.