ಅಮೃತಸರ (ಪಂಜಾಬ್): ಪಂಜಾಬ್ ಸರ್ಕಾರದ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಧಿಕ್ಕರಿಸಿ ಅಮೃತಸರದ ಗೋಲ್ಡನ್ ಟೆಂಪಲ್ನಲ್ಲಿ ಲಂಗಾರ್ (ಸಮುದಾಯ ಅಡಿಗೆ) ಪುನಾರಂಭಿಸಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಪೂಜಾ ಸ್ಥಳಗಳಲ್ಲಿ ಪ್ರಸಾದ ಮತ್ತು ಲಂಗಾರ್ ಅರ್ಪಿಸುವುದನ್ನು ನಿಷೇಧಿಸುವ ಮಾರ್ಗಸೂಚಿಗಳನ್ನು ಪುನರ್ ಪರಿಶೀಲಿಸುವಂತೆ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್‌ಜಿಪಿಸಿ) ಅಧ್ಯಕ್ಷ ಗೋಬಿಂದ್ ಸಿಂಗ್ ಲಾಂಗೋವಾಲ್ ಸರ್ಕಾರವನ್ನು ಒತ್ತಾಯಿಸಿದ್ದರು.
ಧಾರ್ಮಿಕ ಸ್ಥಳಗಳಲ್ಲಿ ಪ್ರಸಾದ ಮತ್ತು ಲಂಗಾರ್ ವಿತರಣೆ ಮಾಡಬಾರದು ಎಂದು ಲಾಕ್‌ಡೌನ್ ಮಾರ್ಗಸೂಚಿಗಳು ತಿಳಿಸುತ್ತವೆ. ಆದರೂ ಸಮುದಾಯ ಅಡುಗೆ ಕೇಂದ್ರದಲ್ಲಿ ಸಂಪೂರ್ಣ ನೈರ್ಮಲ್ಯವನ್ನು ಖಾತ್ರಿಪಡಿಸಿಕೊಂಡಿದ್ದೇವೆ ಎಂದು ಎಸ್‌ಜಿಪಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ ಸರ್ಕಾರವು ಪೂಜಾ ಸ್ಥಳಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ತೆರೆಯಲು ಅನುಮತಿ ನೀಡಿತ್ತು. ಆದರೆ, ಪ್ರಸಾದ ವಿತರಿಸಬಾರದು ಎಂದು ತಿಳಿಸಲಾಗಿತ್ತು.
ಗೋಲ್ಡನ್ ಟೆಂಪಲ್ನಲ್ಲಿ ಭಕ್ತರು ದೇವಾಲಯಕ್ಕೆ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು. ದೇವಾಲಯದ ಪ್ರವೇಶ ಕೇಂದ್ರಗಳಲ್ಲಿ ವಿವಿಧ ವೈದ್ಯರ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೈರ್ಮಲ್ಯೀಕರಣಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ.