ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಹಗರಣದ ಪ್ರಮುಖ ರೂವಾರಿಯಾಗಿರುವ ನೀರವ್ ಮೋದಿ ದೇಶ ಬಿಟ್ಟು ಪರಾರಿಯಾಗಿರೋದು, ಲಂಡನ್ ಜೈಲಿನಲ್ಲಿ ಬಂಧನದಲ್ಲಿರುವುದು ಗೊತ್ತೇ ಇದೆ. ಇದೀಗ ಹೊಸ ವಿಷಯ ಏನೆಂದರೆ, ನೀರವ್ನಿಂದ ಜಪ್ತಿ ಮಾಡಿರುವ ಆಸ್ತಿಗಳನ್ನು ಹರಾಜು ಮಾಡಲು ಸರ್ಕಾರ ಆದೇಶಿಸಿದೆ.
ಈ ಹರಾಜು ಪ್ರಕ್ರಿಯೆ ಎರಡು ಹಂತದಲ್ಲಿ ನಡೆಯಲಿದ್ದು, ಮೊದಲ ಹರಾಜು ಫೆಬ್ರವರಿ 27 ರಂದು ಮುಂಬೈನಲ್ಲಿ ನಡೆಯಲಿದೆ ಹಾಗೂ ಮಾರ್ಚ್ 3-4 ರಂದು ಸ್ಯಾಫ್ರೋನಾರ್ಟ್ ಆನ್‌ಲೈನ್ ಹರಾಜು ಸಂಸ್ಥೆಯ ಮುಖಾಂತರ ಎರಡನೇ ಹರಾಜು ಪ್ರಕ್ರಿಯೆ ಆನ್ಲೈನ್ನಲ್ಲಿ ನಡೆಯಲಿದೆ. ಉದ್ಯಮಿ ನೀರವ್ ಮೋದಿಯ ಕಲಾಕೃತಿಗಳು, ಐಷಾರಾಮಿ ಕೈಗಡಿಯಾರಗಳು ಮತ್ತು ಕಾರು ಸೇರಿದಂತೆ ಇನ್ನಿತರ ವಶಪಡಿಸಿಕೊಂಡ ಆಸ್ತಿಗಳನ್ನು ಹರಾಜಿಗೆ ಹಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಸಂಬಂಧ ಸರ್ಕಾರದಿಂದ ಅಧಿಕೃತ ಮುದ್ರೆಯೂ ಬಿದ್ದಿದೆ.
ಹರಾಜಿನಲ್ಲಿರುವ ಐಶಾರಾಮಿ ವಸ್ತುಗಳ್ಯಾವವು ಗೊತ್ತೇ?
ಈ ಹರಾಜಿನಲ್ಲಿ 15ಕ್ಕೂ ಹೆಚ್ಚು ಕಲಾಕೃತಿಗಳಿದ್ದು, 12 ರಿಂದ 18 ಕೋಟಿ ಬೆಲೆ ಬಾಳುವ ಅಮೃತ ಶೇರ್ - ಗಿಲ್ ಅವರ ಮಹತ್ವದ ಆಧುನಿಕ ಮತ್ತು ಸಮಕಾಲೀನ ಭಾರತೀಯದ ಕಲಾಕೃತಿ ಹಾಗೂ 7ರಿಂದ 9 ಕೋಟಿ ಬೆಲೆ ಬಾಳುವ 1972 ರ ವಿ.ಎಸ್.ಗೈಟೊಂಡೆ ಅವರ ಪ್ರಶಾಂತ ನೀಲಿ ವರ್ಣಚಿತ್ರ ಕಲಾಕೃತಿ, ಮಂಜಿತ್ ಬಾವಾ ಅವರ 3ರಿಂದ 5 ಕೋಟಿ ಬೆಲೆ ಬಾಳುವ ಕೃಷ್ಣನ ಕಲಾಕೃತಿ ಸೇರಿದಂತೆ ಇನ್ನಿತರ ಬೆಲೆ ಬಾಳುವ ಕಲಾಕೃತಿಗಳನ್ನು ಈ ಹರಾಜು ಪ್ರಕ್ರಿಯೆಯಲ್ಲಿ ಇರಿಸಲಾಗಿದೆ.
ಕಲಾಕೃತಿಗಳು ಮಾತ್ರವಲ್ಲದೇ ದುಬಾರಿ ಬೆಲೆಯ ಒಮೆಗಾ, ಟಿಎಜಿ ಹಿಯರ್, ರೋಲೆಕ್ಸ್, ಬ್ರೆಟ್ಲಿಂಗ್, ಜಾಗ್ವಾರ್ ಲೆಕೌಲ್ಟ್ರೆ ಕಂಪನಿಗೆ ಸೇರಿದಂತಹ 80ಕ್ಕೂ ಹೆಚ್ಚು ಕೈಗಡಿಯಾರಗಳು ಈ ಹರಾಜಿನಲ್ಲಿ ಇರಲಿವೆ.
ಹರಾಜಿನ ಬಗ್ಗೆ ಆನ್‌ಲೈನ್ ಸಂಸ್ಥೆ ಹೇಳೋದಿಷ್ಟು!
ಇನ್ನು ಈ ಹರಾಜಿನ ಬಗ್ಗೆ ಸ್ಯಾಫ್ರೋನಾರ್ಟ್ ಆನ್‌ಲೈನ್ ಹರಾಜಿನ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿನೇಶ್ ವಜಿರಾಣಿ ಪ್ರತಿಕ್ರಿಯಿಸಿದ್ದು, ಇಲ್ಲಿ ಹರಾಜಿಗೆ ಇಡಲಾದ ವಸ್ತುಗಳೆಲ್ಲವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹು ಬೇಡಿಕೆ ಇರುವಂತದ್ದಾಗಿದೆ. ದೊಡ್ಡ ದೊಡ್ಡ ಐಷಾರಾಮಿ ವ್ಯಕ್ತಿಗಳು ಇದನ್ನು ಬಳಸುವುದಾದ್ದರಿಂದ ಈ ಹರಾಜಿನ ಪ್ರಕ್ರಿಯೆಯಲ್ಲಿ ಎಲ್ಲಾ ವಸ್ತುಗಳಿಗೆ ಬಹು ಬೇಡಿಕೆ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.