ನವದೆಹಲಿ: ಗಣರಾಜ್ಯೋತ್ಸವ ದಿನ ನಡೆದ ಟ್ರ್ಯಾಕ್ಟರ್ ರ‍್ಯಾಲಿ ಕುರಿತು ಟ್ವೀಟ್ ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು 6 ಜನ ಹಿರಿಯ ಪತ್ರಕರ್ತರ ಬಂಧನಕ್ಕೆ ಸುಪ್ರೀಂಕೋರ್ಟ್ ಇಂದು ತಡೆ ನೀಡಿದೆ.
ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ರೈತನೊಬ್ಬ ಮೃತಪಟ್ಟ ವಿಚಾರವಾಗಿ ದೃಢಪಡದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿತರೂರ್, ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ, ನ್ಯಾಷನಲ್ ಹೆರಾಲ್ಡ್‌ನ ಮ್ರಿಣಾಲ್ ಪಾಂಡೆ ಪಾಂಡೆ, ಕೌಮಿ ಆವಾಜ್‌ನ ಜಾಫರ್ ಆಘಾ, ದಿ ಕ್ಯಾರವನ್ ಸುದ್ದಿ ಸಮೂಹದ ಅನಂತ್ ನಾಥ್ ಮತ್ತು ವಿನೋದ್ ಜೋಶ್ ವಿರುದ್ಧ ದೆಹಲಿ ಪೊಲೀಸರು ಜನವರಿ 30 ರಂದು ಎಫ್‌ಐಆರ್ ದಾಖಲಿಸಿದ್ದರು. ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಹಿಂಸಾಚಾರದ ಬಗ್ಗೆ ತಪ್ಪುದಾರಿಗೆಳೆಯುವ ರೀತಿ ಟ್ವೀಟ್ ಮಾಡಿರುವ ಬಗ್ಗೆ ಮಧ್ಯಪ್ರದೇಶ ಪೊಲೀಸರು ಸಹ ತರೂರ್ ಮತ್ತು ಆರು ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಜನವರಿ 26ರಂದು ರೈತರು ದೆಹಲಿಯಲ್ಲಿ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರಕ್ಕೆ ತಿರುಗಿತ್ತು. ಆ ಸಂದರ್ಭ ಮೃತಪಟ್ಟಿದ್ದ ಯುವಕನೋರ್ವನ ಸಾವಿಗೆ ಸಂಬಂಧಿಸಿದಂತೆ ತರೂರ್ ಹಾಗೂ ಇತರರು ಟ್ವೀಟ್ ಮಾಡಿದ್ದರು. ಮೃತ ಯುವಕ ಆಸ್ಟ್ರೇಲಿಯಾದಿಂದ ತವರಿಗೆ ಮರಳಿದ್ದ ವಿದ್ಯಾರ್ಥಿ ಎಂಬುದು ಬಳಿಕ ತಿಳಿದು ಬಂದಿತ್ತು.