ನವದೆಹಲಿ: ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನೀಡಿದ್ದ ಕ್ಲೀನ್ ಚಿಟ್ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಮಹತ್ವದ ಒಪ್ಪಂದದಲ್ಲಿ ಮತ್ತೆ ಜಯ ಸಿಕ್ಕಿದೆ.
ಕೇಂದ್ರ ಸರ್ಕಾರಕ್ಕೆ ನೀಡಿದ್ದ ಕ್ಲೀನ್ ಚಿಟ್ ತೀರ್ಪನ್ನು ಮರುಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಗಳನ್ನೂ ಸುಪ್ರೀ ಕೋರ್ಟ್ ವಜಾಗೊಳಿಸಿದೆ. 2018 ಡಿಸೆಂಬರ್ 14ರಂದು ನೀಡಿದ್ದ ಸುಪ್ರೀಂಕೋರ್ಟ್ ತೀರ್ಪಿನ ಸಂಬಂಧ ಮರುಪರಿಶೀಲನಾ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯನ್ನೂ ವಜಾಗೊಳಿಸಿರುವ ಕೋರ್ಟ್ ಮತ್ತೆ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದೆ.
ಏನಿದು ಪ್ರಕರಣ?
ಯುಪಿಎ ಸರ್ಕಾರದ ಅವಧಿಯಲ್ಲಿ ಫ್ರಾನ್ಸ್ನ ಡೆಸಾಲ್ಟ್ ಏವಿಯೇಷನ್ ಸಂಸ್ಥೆಯೊಂದಿಗೆ ಮಾಡಿಕೊಳ್ಳಲಾದ 36 ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಆರೋಪಿಸಿದ್ದವು. ಡೀಲ್ ವೇಳೆ ನಿಗದಿತ ಮೊತ್ತಕ್ಕಿಂತ ಹೆಚ್ಚು ಮೊತ್ತಕ್ಕೆ ವಿಮಾನಗಳನ್ನು ಖರೀದಿಸಲಾಗಿದೆ ಎಂದು ಕೇಂದ್ರದ ವಿರುದ್ದ ಆಪಾದಿಸಲಾಗಿತ್ತು. ಒಪ್ಪಂದ ಮಾಡಿಕೊಳ್ಳಲಾದ ನಿಗದಿತ ಮೊತ್ತವನ್ನು ಬಹಿರಂಗಗೊಳಿಸುವಂತೆ ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷಗಳು ನರೇಂದ್ರ ಮೋದಿ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ರಫೇಲ್ ಯುದ್ಧ ವಿಮಾನ ಖರೀದಿಯು ದೇಶದ ರಕ್ಷಣೆ ವಿಚಾರಕ್ಕೆ ಸಂಬಂಧಿಸಿದೆ. ಇದನ್ನು ಗುಪ್ತವಾಗಿಕೊಳ್ಳಬೇಕು ಎಂದು ಮೋದಿ ಸರ್ಕಾರ ಕೋರ್ಟ್ ಮುಂದೆ ಪ್ರತಿಪಾದಿಸಿತ್ತು.
ಈ ವಿಚಾರವನ್ನಿಟ್ಟುಕೊಂಡು ಒಪ್ಪಂದದಲ್ಲಿ ಕಳ್ಳತನ ನಡೆದಿದೆ ಎಂದು ಕಾಂಗ್ರೆಸ್, ಮೋದಿ ಹಾಗೂ ಮೋದಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿತ್ತು. 'ಚೌಕಿದಾರ್ ಚೋರ್ ಹೈ', ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮೋದಿ ಸರ್ಕಾರವನ್ನು ಜರಿದು ಸುಪ್ರೀಂಕೋರ್ಟ್ಗೆ ಪ್ರಕರಣದ ತನಿಖೆ ನಡೆಸುವಂತೆ ಅರ್ಜಿ ಸಲ್ಲಿಸಿತು.
ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ, ರಫೇಲ್ ಒಪ್ಪಂದದ ಒಟ್ಟು ಮೊತ್ತ ಸೇರಿದಂತೆ ಎಲ್ಲಾ ದಾಖಲೆಗಳನ್ನು ಘನ ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸುವಂತೆ ಸೂಚಿಸಿತು. ಅದರಂತೆಯೇ ಖರೀದಿ ಒಪ್ಪಂದದ ಮೊತ್ತ, ಖರೀದಿಯ ಹಂತಗಳು ಸೇರಿದಂತೆ ಎಲ್ಲಾ ದಾಖಲೆಗಳನ್ನು ಕೇಂದ್ರ ಸರ್ಕಾರ ಕೋರ್ಟ್ ಮುಂದಿಟ್ಟಿತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ, 2018 ಡಿಸೆಂಬರ್ 14ರಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಯುದ್ಧವಿಮಾನ ಖರೀದಿಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಪ್ರತಪಾದಿಸಿತು. ಅಲ್ಲದೆ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ, ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿತು.
ತೀರ್ಪು ಮರಿಪರಿಶಿಲನಾ ಅರ್ಜಿ ಸಲ್ಲಿಕೆ.
ಆದರೆ, ಸುಪ್ರೀಂ ತೀರ್ಪು ಬಗ್ಗೆ ಅಸಮಾಧಾನ ಹೊರಹಾಕಿದ ಕಾಂಗ್ರೆಸ್, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿತು. ಅಲ್ಲದೆ ಈ ಬಗ್ಗೆ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲೂ ಧ್ವನಿ ಎತ್ತಿದ ಕಾಂಗ್ರೆಸ್ ರಫೇಲ್ ಒಪ್ಪಂದ ನಿಖರ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು. ಇನ್ನೊಂದೆಡೆ ಸುಪ್ರೀಂ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ಮಾಜಿ ಕೇಂದ್ರ ಸಚಿವರಾದ ಯಶ್ವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಸಾಮಾಜಿಕ ಕಾರ್ಯಕರ್ತ ವಕೀಲ ಪ್ರಶಾಂತ್ ಭೂಷಣ್, ತೀರ್ಪು ಮರು ಪರಿಶೀಲಿಸುವಂತೆ ಅರ್ಜಿ ಸಲ್ಲಿಸಿದರು. ಈ ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್ ಅಂತಿಮವಾಗಿ ತನ್ನ ಹಳೆಯ ನಿಲುವಿಗೆ ಅಂಟಿಕೊಂಡಿದೆ.