ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಚೀನಾದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ ಎಂದು ದ ನ್ಯೂಯಾರ್ಕ್ ಟೈಮ್ಸ್ ಮಂಗಳವಾರ ವರದಿ ಮಾಡಿದೆ.
ಕೇವಲ ಮೂರು ವಿದೇಶಗಳಲ್ಲಿ ಟ್ರಂಪ್ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ಬ್ರಿಟನ್, ಐರ್ಲೆಂಡ್ ಹಾಗೂ ಚೀನಾದಲ್ಲಿ ಖಾತೆಯನ್ನು ಹೊಂದಿದ್ದು ಚೀನಾದಲ್ಲಿರುವ ಖಾತೆಯನ್ನು ಟ್ರಂಪ್ ಇಂಟರ್ನ್ಯಾಷನಲ್ ಹೋಟೆಲ್ಸ್ ಮ್ಯಾನೇಜ್ಮೆಂಟ್ ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸುಮಾರು ವರ್ಷಗಳ ಕಾಲ ಡೊನಾಲ್ಡ್ ಟ್ರಂಪ್ ಚೀನಾದಲ್ಲಿ ಕೆಲವೊಂದು ಪ್ರಾಜೆಕ್ಟ್ಗಳನ್ನು ನಿರ್ವಹಿಸಿದ್ದು, ಅವುಗಳು ವಿಫಲವಾಗಿದ್ದವು. ಜೊತೆಗೆ ಚೀನಾ ಸರ್ಕಾರದ ಪಾಲುದಾರಿಕೆಯಲ್ಲಿ ಕಚೇರಿಯೊಂದನ್ನು ನಡೆಸುತ್ತಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ಮಾಹಿತಿ ನೀಡಿದೆ.
ಟ್ರಂಪ್ ಅವರ ತೆರಿಗೆ ದಾಖಲೆಗಳನ್ನು ದಿ ಟೈಮ್ಸ್ ಪತ್ರಿಕೆ ಪರಿಶೀಲನೆ ನಡೆಸಿದಾಗ ಮಾಹಿತಿ ಹೊರಬಿದ್ದಿದ್ದು, 2013 ಹಾಗೂ 2015ರ ಅವಧಿಯಲ್ಲಿ ಪರವಾನಗಿ ವ್ಯವಹಾರಗಳ ವೇಳೆ ಸುಮಾರು 1,88,561 ಅಮೆರಿಕನ್ ಡಾಲರ್ಗಳನ್ನು ತೆರಿಗೆಯಾಗಿ ಪಾವತಿಸಿದ್ದಾರೆ ಎಂದು ಗೊತ್ತಾಗಿದೆ.
ಟೈಮ್ಸ್ ಪ್ರಶ್ನೆಗೆ ಉತ್ತರಿಸಿರುವ ಟ್ರಂಪ್ ಆರ್ಗನೈಸೇಷನ್ ವಕೀಲ ಅಲನ್ ಗಾರ್ಟನ್ ಸ್ಥಳೀಯ ತೆರಿಗೆಗಳನ್ನು ಪಾವತಿಸುವ ಸಲುವಾಗಿ ಚೀನಾದ ಬ್ಯಾಂಕ್ನಲ್ಲಿ ಖಾತೆ ತೆರೆಯಲಾಗಿದೆ. ಏಷ್ಯಾ ಭಾಗದಲ್ಲಿ ಹೋಟೆಲ್ಗಳನ್ನ ತೆರೆಯುವ ಸುಲುವಾಗಿ ಚೀನಾದಲ್ಲಿ ಕಚೇರಿಯನ್ನು ಸ್ಥಾಪಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.
ಇದರ ಜೊತೆಗೆ 2015ರಿಂದ ಚೀನಾದೊಂದಿಗೆ ಯಾವುದೇ ವ್ಯವಹಾರ ನಡೆಸುತ್ತಿಲ್ಲ. ಅಲ್ಲಿನ ಕಚೇರಿ ನಿಷ್ಕ್ರಿಯಗೊಂಡಿದೆ. ಈಗಲೂ ಬ್ಯಾಂಕ್ ಖಾತೆ ಇದ್ದರೂ ಅದನ್ನು ಬಳಸುತ್ತಿಲ್ಲ ಎಂದು ಅಲನ್ ಗಾರ್ಟನ್ ಅವರು ಟೈಮ್ಸ್ಗೆ ಮಾಹಿತಿ ನೀಡಿದ್ದಾರೆ.