ಮುಂಬೈ: ವಸೂಲಾಗದ ಸಾಲಗಳಿಗೆ (ಎನ್ಪಿಎ)ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೊರಡಿಸಿರುವ ಪರಿಷ್ಕೃತ ಸುತ್ತೋಲೆ ವಾಣಿಜ್ಯ ಬ್ಯಾಂಕ್ಗಳು ಹಾಗೂ ಸಾಲಗಾರರಿಗೆ ಅನುಕೂಲಕರವಾಗಲಿದ ಎಂದು ಜಾಗತಿಕ ಹಣಕಾಸು ಮಾನದಂಡ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ.
ದೊಡ್ಡ ಕಂಪನಿಗಳು ಸಾಲ ಮರುಪಾವತಿ ಮಾಡುವಲ್ಲಿ ಒಂದೇ ಒಂದು ದಿನ ವಿಳಂಬ ಮಾಡಿದರೂ ಅಂಥ ಸಾಲ ಖಾತೆಗಳನ್ನು ಸುಸ್ತಿ ಸಾಲ ಎಂದು ವರ್ಗೀಕರಿಸಿ ಹಾಗೂ ದಿವಾಳಿ ಸಂಹಿತೆಯಡಿ ಕ್ರಮಕೈಗೊಳ್ಳಲು ಬ್ಯಾಂಕ್‌ಗಳಿಗೆ ಆರ್ಬಿಐ ಅವಕಾಶ ನೀಡಿತ್ತು. ಪರಿಷ್ಕೃತ ಸುತ್ತೋಲೆಯಡಿ ಇದನ್ನು ವಾಪಸ್ ಪಡೆದು ಒಂದು ದಿನದ ಗಡುವನ್ನು 30 ದಿನಕ್ಕೆ ವಿಸ್ತರಿಸಿದೆ.
ಈ ನೂತನ ಸುತ್ತೋಲೆ ವಿವೇಕಯುತ ನಿರ್ಧಾರವಾಗಿದೆ. ಇದೊಂದು ನಿಯಂತ್ರಣ ಕ್ರಮವಾಗಿದ್ದು, ವಿದ್ಯುತ್ ಉತ್ಪಾದನಾ ವಲಯ ಕಂಪನಿಗಳಲ್ಲಿ ಈಗ ಬಿಕ್ಕಟ್ಟಿನಿಂದ ಪಾರಾಗಲಿವೆ. ದ್ವಿಪಕ್ಷೀಯ ನೆಲೆಯಲ್ಲಿ ಸಾಲ ವಸೂಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಅಥವಾ ಹರಾಜು ನಡೆಸುವ ಉದ್ದೇಶಕ್ಕೆ ಎನ್‌ಸಿಎಲ್‌ಟಿ ಶಿಫಾರಸು ಮಾಡಲು ಬ್ಯಾಂಕ್‌ಗಳಿಗೆ ಸ್ವಾತಂತ್ರ್ಯ ನೀಡಿದಂತಾಗಿದೆ. ಹಣಕಾಸು ಸಂಸ್ಥೆಗಳಿಗೆ ಮಾನದಂಡ ನೀಡುವ ಸಂಸ್ಥೆಗಳಾದ ಮೂಡಿಸ್, ಕ್ರಿಸಿಲ್ ಮತ್ತು ಅಮೆರಿಕದ ದಲ್ಲಾಳಿ ಸಂಸ್ಥೆ ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಚ್ ವಿಶ್ಲೇಷಿಸಿವೆ. ವಸೂಲಾಗದ ಸಾಲ ಖಾತೆಗಳಿಂದ ಬಾಕಿ ವಸೂಲಿಗೆ ಹೊಸ ನಿಯಮಗಳು ಸರಳವಾಗಿವೆ. ಪರಿಹಾರ ಕಂಡುಕೊಳ್ಳುವಾಗ ಎದುರಾಗಲಿದ್ದ ತೀವ್ರ ವಿಳಂಬವೂ ದೂರವಾಗಿದೆ ಎಂದು ಕ್ರಿಸಿಲ್ ಹೇಳಿದೆ.