ನವದೆಹಲಿ: ರಾಜ್ಯಸಭೆಯ 8 ಸದಸ್ಯರನ್ನು ಕಲಾಪದಿಂದ ಅಮಾನತು ಮಾಡಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಉಳಿದ ಅಧಿವೇಶನವನ್ನು ಬಹಿಷ್ಕರಿಸುವುದಾಗಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿಂದು ಮಾತನಾಡಿದ ಅವರು, ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖಾಸಗಿಯವರು ರೈತರ ಬೆಳೆಗಳನ್ನು ಖರೀದಿಸುವ ಮಸೂದೆ ಜಾರಿಗೆ ಸರ್ಕಾರ ಮುಂದಾಗಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. ಜೊತೆಗೆ 8 ಮಂದಿ ಸಂಸದರ ಅಮಾನತು ಆದೇಶ ವಾಪಸ್ ಪಡೆಯಬೇಕು. ಈ ನಮ್ಮ ಬೇಡಿಕೆಗಳು ಈಡೇರದಿದ್ದರೆ ಉಳಿದ ಭಾಗದ ಕಲಾಪವನ್ನು ಬಹಿಷ್ಕರಿಸುತ್ತೇವೆ ಎಂದು ಹೇಳಿದರು.
ಮೇಲ್ಮನೆಯಲ್ಲಿ ನಡೆಯುತ್ತಿರುವ ಘಟನೆಗಳಿಂದ ಯಾರೂ ಸಂತೋಷಗೊಂಡಿಲ್ಲ. ತಮ್ಮ ನಾಯಕ ಇಲ್ಲಿರಬೇಕು ಎಂಬುದು ಸಾರ್ವಜನಿಕರ ಅಪೇಕ್ಷೆಯಾಗಿದೆ. ಸದಸ್ಯರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಆಜಾದ್ ಕಲಾಪದಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯಸಭೆ ಸದಸ್ಯರನ್ನು ಮುಂದಿನ ಕಾಲಪಕ್ಕೆ ಅಮಾನತು ಮಾಡಿರುವುದಕ್ಕೆ ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್ ಕ್ಷಮೆಯಾಚಿಸಿದ್ದಾರೆ. ಕೂಡಲೇ ಅಮಾನತು ಆದೇಶವನ್ನು ವಾಪಸ್ ಪಡೆಯಬೇಕು. ಎರಡೂ ಕಡೆಯವರಿಂದ ತಪ್ಪಾಗಿದೆ ಎಂದು ಹೇಳಿದ್ದಾರೆ.
ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು, ರಾಜ್ಯಸಭೆಯಲ್ಲಿ ಇದೇ ಮೊದಲ ಬಾರಿಗೆ ಅಮಾನತು ಮಾಡಿಲ್ಲ. ಸಚಿವರು ಮಸೂದೆ ಮಂಡಿಸಿದ ವೇಳೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲುವ ಪ್ರಯತ್ನ ಮಾಡಲಾಗಿದೆ. ಉಪ ಸಭಾಪತಿಯವರನ್ನು ಕುರ್ಚಿಯಿಂದ ಕೆಳಗಿಳಿಸಲು ನಿರ್ದಿಷ್ಟವಾದ ಕ್ರಮವಿದೆ ಎಂದು ಹೇಳಿದರು.