ಜೈಪುರ: ಸೋಮವಾರ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‌ಪಿ) ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಯಾವುದೇ ಕಾರಣವನ್ನ ನೀಡಿದೇ ಎಲ್ಲ ಶಾಸಕರು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪಕ್ಷದ ಎಲ್ಲ ಶಾಸಕರಿಗೆ ಸೂಚನೆ ನೀಡಿದೆ. ಸಭೆಗೆ ಗೈರು ಹಾಜರಾದರೆ ಪಕ್ಷದ ಶಿಸ್ತು ಕ್ರಮಕ್ಕೆ ಒಳಬೇಕಾಗುತ್ತದೆ ಎಂದು ಕಠಿಣ ಎಚ್ಚರಿಕೆಯನ್ನ ತನ್ನ ಆದೇಶದಲ್ಲಿ ನೀಡಿದೆ.
ಇಂದು ಬೆಳಗ್ಗೆ 10: 30 ಕ್ಕೆ ಸಿಎಲ್‌ಪಿ ಸಭೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿವಾಸದಲ್ಲಿ ಭಾನುವಾರ ನಡೆದ ಸಭೆಯ ನಂತರ ಇಂದಿನ ಸಭೆಗೆ ಹಾಜರಾಗುವಂತೆ ಎಲ್ಲ ಶಾಸಕರಿಗೆ ವಿಪ್ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಸಚಿವರು ಸೇರಿದಂತೆ ಸುಮಾರು 75 ಶಾಸಕರು ಭಾಗವಹಿಸಿದ್ದರು. ಸಭೆಯ ನಂತರ, ಪಾಂಡೆ ಸೋಮವಾರ ಮುಂಜಾನೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಪಕ್ಷದ ಸಹೋದ್ಯೋಗಿ ರಂದೀಪ್ ಸುರ್ಜೆವಾಲಾ ಮತ್ತು ಅಜಯ್ ಮಾಕೆನ್ ಅವರೊಂದಿಗೆ ಭಾನುವಾರ ತಡರಾತ್ರಿ ಜೈಪುರ ತಲುಪಿದ್ದರು. ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು, ಉಭಯ ನಾಯಕರನ್ನು ಕೇಂದ್ರ ವೀಕ್ಷಕರಾಗಿ ರಾಜಸ್ಥಾನಕ್ಕೆ ಕಳುಹಿಸಿದೆ.
"ಬೆಳಗ್ಗೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ ಎಲ್ಲ ಶಾಸಕರಿಗೆ ಕಡ್ಡಾಯವಾಗಿ ಹಾಜರಾಗುವಂತೆ ವಿಪ್ ನೀಡಲಾಗಿದೆ. ಸರಿಯಾದ ಕಾರಣವನ್ನು ಉಲ್ಲೇಖಿಸದೇ ಗೈರು ಹಾಜರಾದ ಯಾವುದೇ ಶಾಸಕರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು" ಎಂದು ಪಾಂಡೆ ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರದ ಮೇಲೆ 109 ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಇದೇ ವೇಳೆ ಪಾಂಡೆ ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಜನತಾ ಪಕ್ಷ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ರಾಜಸ್ಥಾನದ ಕಾಂಗ್ರೆಸ್ ಉಸ್ತುವಾರಿ ಆರೋಪಿಸಿದ್ದಾರೆ. "ಬಿಜೆಪಿ ಪ್ರತಿ ರಾಜ್ಯದಲ್ಲೂ ಇದನ್ನು ಮಾಡುತ್ತಿದೆ. ನಾವು ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಇದೇ ಪರಿಸ್ಥಿತಿಯನ್ನ ನೋಡಿದ್ದೇವೆ. ಆದರೆ, ಬಿಜೆಪಿಯವರ ಈ ಪ್ರಯತ್ನ ಇಲ್ಲಿ ನಡೆಯುವುದಿಲ್ಲ ಎಂದು ಪಾಂಡೆ ಹೇಳಿದ್ದಾರೆ.
ಡಿಸಿಎಂ ಪೈಲಟ್ ಈ ಸಭೆಯಲ್ಲಿ ಪಾಲ್ಗೊಳ್ಳಲ್ಲ: ಪ್ರಸ್ತುತ ನವದೆಹಲಿಯಲ್ಲಿ ಕ್ಯಾಂಪ್ ಹಾಕಿರುವ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸಿಎಲ್‌ಪಿ ಸಭೆಯಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರಿಸಿದ ಸುರ್ಜೆವಾಲಾ "ಅವರು ಸಭೆಗೆ ಹಾಜರಾಗುವುದಿಲ್ಲ ಎಂದು ನೀವು ಏಕೆ ಭಾವಿಸುತ್ತೀರಿ?" ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಆರೋಪ ನಿರಾಕರಿಸಿದ ಬಿಜೆಪಿ: ಕಾಂಗ್ರೆಸ್ ಶಾಸಕರನ್ನು ಬೇಟೆಯಾಡುವ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಗೆಹ್ಲೋಟ್ ಆರೋಪಿಸಿದ್ದಾರೆ. ಸಿಎಂ ಗೆಹ್ಲೋಟ್ ಅವರ ಈ ಆರೋಪವನ್ನ ಬಿಜೆಪಿ ತಳ್ಳಿಹಾಕಿದೆ.