ಗುವಾಹಟಿ/ಅಸ್ಸೋಂ: ರಾಜ್ಯಸಭಾ ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರವಷ್ಟೇ ನಾನು ಮಾತನಾಡುವೆ ಎಂದು ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.
'ನಾಳೆ ಮೊದಲು ದೆಹಲಿಗೆ ತೆರಳಿ ಪ್ರಮಾಣ ವಚನ ಸ್ವೀಕರಿಸುವೆ. ನಾನು ಏಕೆ ಈ ಆಹ್ವಾನವನ್ನು ಸ್ವೀಕರಿಸಿದ್ದೇನೆ ಎಂಬುದನ್ನು ನಂತರ ತಿಳಿಸುವೆ' ಎಂದು ಗೊಗೊಯ್ ಅಸ್ಸೋಂನ ಗುವಾಹಟಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸೋಮವಾರ ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗೊಗೊಯ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದ್ದರು.
13 ತಿಂಗಳ ಕಾಲ ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಂಜನ್ ಗೊಗೊಯ್ ಕಳೆದ ನವೆಂಬರ್ನಲ್ಲಿ ನಿವೃತ್ತಿಯಾಗಿದ್ದಾರೆ. ಜನವರಿ 2018 ರಲ್ಲಿ ಕಾರ್ಯನಿರತ ನಾಲ್ವರು ಪ್ರಮುಖ ನ್ಯಾಯಮೂರ್ತಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ್ದ ಅವರು, 'ತಮಗೆ ಬೇಕಾದ ನ್ಯಾಯಮೂರ್ತಿಗಳಿಗೆ ಪ್ರಕರಣಗಳನ್ನು ವಹಿಸಲಾಗುತ್ತಿದೆ ಹಾಗೂ ಸೂಕ್ಷ್ಮ ಪ್ರಕರಣಗಳ ವಿಚಾರಣೆಯನ್ನು ಕಿರಿಯ ನ್ಯಾಯಮೂರ್ತಿಗಳಿಗೆ ವಹಿಸಲಾಗುತ್ತಿದೆ' ಎಂದು ಹೇಳುವ ಮೂಲಕ ಅಚ್ಚರಿ ಉಂಟು ಮಾಡಿದ್ದರು.