ಭುವನೇಶ್ವರ/ ಒಡಿಶಾ: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇಂದು ಭಾರೀ ಪ್ರಮಾಣದ ಅಕಾಲಿಕ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಗುಡುಗು ಸಹಿತ ಸುರಿದ ಮಳೆಗೆ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಅಲ್ಲದೇ ಮರಗಳು ಉರುಳಿ ರಾಜ್ಯದ ಹಲವೆಡೆ ವಿದ್ಯುತ್ ಸಂಪರ್ಕದಲ್ಲೂ ವ್ಯತ್ಯಯ ಉಂಟಾಗಿದೆ.
ನಾಳೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಸಹ ನೀಡಿದೆ. ರಾಜ್ಯದ ಮಯೂರ್ಭಂಜ್, ಕಿಯೋಂಜಾರ್ , ಧೆಂಕನಲ್, ಬೌಧ್ ಮತ್ತು ಕಂಧಮಾಲ್ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಇದುವರೆಗೆ ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ ಪಶ್ಚಿಮ ಒಡಿಶಾದ ಸೋನೆಪುರದಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗೆ 57.8 ಮಿ.ಮೀ ಮಳೆಯಾಗಿದೆ. ಇತರ ಪ್ರದೇಶಗಳಾದ ಬೌಧ್ 45.2 ಮಿ.ಮೀ, ಫುಲ್ಬಾನಿ 41 ಮಿ.ಮೀ, ಬೋಲಂಗೀರ್ 30 ಮಿ.ಮೀ ಮತ್ತು ಟಾಲ್ಚರ್ 14 ಮಿ.ಮೀ ಮಳೆಯಾಗಿದೆ.
ಅವಳಿ ನಗರಗಳಾದ ಭುವನೇಶ್ವರ ಮತ್ತು ಕಟಕ್ ಗಳಲ್ಲಿಯೂ ಇಂದು ಮುಂಜಾನೆ ಮಳೆಯಾಗಿದೆ. ಭಾರಿ ಮಳೆಯ ಮಧ್ಯೆ ಜನರು ಪ್ರಯಾಣಿಸುವುದು ಕಷ್ಟಕರವಾಗಿದೆ.