ನವದೆಹಲಿ: ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್ಗಳಿಂದ ದೊಡ್ಡ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿರುವವರ ಹೆಸರು ಬಹಿರಂಗಪಡಿಸಬೇಕು ಎಂದು ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ಭಾರತೀಯ ರಿಸರ್ವ್ ಬ್ಯಾಂಕ್ಗೆ (ಆರ್ಬಿಐ) ಆದೇಶಿಸಿದೆ.
ಲಖನೌದ ಸಾಮಾಜಿಕ ಕಾರ್ಯಕರ್ತೆ ನೂತನ್ ಠಾಕೂರ್ ಸಲ್ಲಿಸಿರುವ ಮಾಹಿತಿ ಹಕ್ಕು ಕಾಯ್ದೆಯಡಿಯ (ಆರ್ಟಿಐ) ಅರ್ಜಿಗೆ ಸಂಬಂಧಿಸಿದಂತೆ ಸಿಐಸಿ ಈ ನಿರ್ದೇಶನ ನೀಡಿದೆ.
ಆರ್ಬಿಐ ಪಟ್ಟಿ ಮಾಡಿರುವ ಸುಸ್ತಿದಾರರ ಕುರಿತು ತಮಗೆ ಮಾಹಿತಿ ನೀಡಬೇಕು. ಈ ಸಂಬಂಧ ನಡೆದ ಪತ್ರ ವ್ಯವಹಾರ ಹಾಗೂ ಸಭೆಗಳ ಟಿಪ್ಪಣಿಯನ್ನು ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ಗೋಪ್ಯ ಮಾಹಿತಿಯ ವಿವರಗಳನ್ನು ನೀಡುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಈ ಹಿಂದೆ ನಿಲುವು ತಳಿದಿತ್ತು. ಈ ಕಾರಣಕ್ಕೆ ನೂತನ್ ಠಾಕೂರ್ ಅವರು ಕೇಂದ್ರೀಯ ಮಾಹಿತಿ ಆಯೋಗಕ್ಕೆ ಮನವಿ ಮಾಡಿದ್ದರು.
ಆರ್ಬಿಐ ಡೆಪ್ಯುಟಿ ಗವರ್ನರ್ ವಿರಳ್ ಆಚಾರ್ಯ ಅವರು ಈ ಹಿಂದೆ ನೀಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ, ಸಾಲ ವಸೂಲಾತಿಗೆ ಕ್ರಮ ಕೈಗೊಳ್ಳಲು ಆರ್ಬಿಐ ಬ್ಯಾಂಕ್ಗಳಿಗೆ ಕೆಲ ಸುಸ್ತಿದಾರರ ಹೆಸರುಗಳನ್ನು ರವಾನಿಸಿದೆ ಎಂದು ಹೇಳಿದ್ದರು.