ವಾಷಿಂಗ್ಟನ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಒಂದು ವಾರ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಮೂಲದ ಅಮೆರಿಕ ಸಂಸದೆ ತುಳಸಿ ಗಬ್ಬಾರ್ಡ್ ಮೋದಿಯವರನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಮೆರಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ ತುಳಸಿ, ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಕಾರ್ಯಕ್ರಮ ಪೂರ್ವ ನಿಗದಿಯಾಗಿರುವ ಕಾರಣ, ’ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರುವ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಭಾರತ, ವಿಶ್ವದ ಅತ್ಯಂತ ಪುರಾತನ ಹಾಗೂ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಹಾಗೂ ಅಮೆರಿಕದ ಅತ್ಯಂತ ಪ್ರಮುಖ ಸ್ನೇಹಿತ ರಾಷ್ಟ್ರವಾಗಿದೆ. ನಮ್ಮೆರಡೂ ರಾಷ್ಟ್ರಗಳನ್ನು ಹಾಗೂ ವಿಶ್ವದ ನಾನಾ ರಾಷ್ಟ್ರಗಳನ್ನು ಬಾಧಿಸುತ್ತಿರುವ ಹವಾಮಾನ ವೈಪರೀತ್ಯ ಸೇರಿ ಅನೇಕ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಬೇಕಿದೆ. ಆ ಮೂಲಕ ಉಭಯ ರಾಷ್ಟ್ರಗಳ ಜನತೆಯ ಆರ್ಥಿಕ ಔನ್ನತ್ಯಕ್ಕೆ ಶ್ರಮಿಸಬೇಕಿದೆ ಎಂದಿದ್ದಾರೆ.
ಇನ್ನು ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಕುರಿತು ಕ್ಷಮೆ ಕೇಳಿರುವ ತುಳಸಿ ಅವರು, ಮೋದಿಯವರ ಈ ಒಂದು ವಾರದ ಅಮೆರಿಕ ಪ್ರವಾಸದೊಳಗೆ ಅವರನ್ನು ಭೇಟಿಯಾಗುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಈ ನಡುವೆ ಪ್ರಧಾನಿ ಮೋದಿ ಒಂದು ವಾರದ ಅಮೆರಿಕ ಪ್ರವಾಸದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಸೇರಿದಂತೆ ಹಲವು ಗಣ್ಯರನ್ನು ಭೇಟಿ ಮಾಡಲಿದ್ದಾರೆ. ಇನ್ನು ಹೌಡಿ ಕಾರ್ಯಕ್ರಮದಲ್ಲಿ ಟ್ರಂಪ್ ಹಾಗೂ ಮೋದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ವಿಶ್ವದ ಗಮನ ಸೆಳೆಯಲಿದ್ದಾರೆ.
ಪ್ರಧಾನಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ. ಈ ಬಾರಿ ಪಾಕ್ ಹಾಗೂ ಭಾರತ ನಡುವೆ ಪರಿಸ್ಥಿತಿ ತೀವ್ರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆ ಭಾಷಣ ಭಾರಿ ಮಹತ್ವ ಪಡೆದುಕೊಂಡಿದೆ.