ಯಾವತ್ನಾಲ್(ಮಹಾರಾಷ್ಟ್ರ): ಮುಂಬರುವ ಲೋಕಸಭಾ ಚುನಾವಣೆ ಅಖಾಡ ಈಗಾಗಲೇ ಸಜ್ಜಾಗಿದೆ. ವಿವಿಧ ಕ್ಷೇತ್ರಗಳಿಂದ ಸ್ಪರ್ಧೆ ಮಾಡಲು ಅಭ್ಯರ್ಥಿಗಳು ತಮ್ಮ ತಮ್ಮ ಪಕ್ಷದಿಂದ ಟಿಕೆಟ್ ಪಡೆದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇದರ ಮಧ್ಯೆ ಮೃತ ರೈತನ ಪತ್ನಿಗೆ ಪಕ್ಷವೊಂದು ಟಿಕೆಟ್ ನೀಡಿದೆ.
ಮಹಾರಾಷ್ಟ್ರದ ಯಾವತ್ನಾಲ್-ವಾಸೀಂ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲು ಆತ್ಮಹತ್ಯೆ ಮಾಡಿಕೊಂಡಿದ್ದ ಮೃತಸುಧಾಕರ್ ಯಡ್ಡಿ ಎಂಬ ರೈತನ ಪತ್ನಿವೈಶಾಲಿ ಸುಧಾಕರ್ ಯಡ್ಡಿ ನಿರ್ಧರಿಸಿದ್ದಾರೆ. ಶಾಸಕ ಬಚ್ಚು ಕಾಡು ನೇತೃತ್ವದ ಪ್ರಾಹರ್ ಪಾರ್ಟಿ ಕೆಲ ತಿಂಗಳ ಹಿಂದೆಅಸ್ತಿತ್ವಕ್ಕೆ ಬಂದಿತ್ತು. ಅದೇ ಪಕ್ಷದಿಂದಲೇ ವೈಶಾಲಿ ಟಿಕೆಟ್ ಪಡೆದು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
2011ರಲ್ಲಿ ವೈಶಾಲಿ ಗಂಡ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದರು. ಇದಾದ ಬಳಿಕ ಪತ್ನಿ ವೈಶಾಲಿ ಅನೇಕ ಸಂಘಟನೆಗಳೊಂದಿಗೆ ಕೈಜೋಡಿಸಿ, ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಈ ಸಲದ ಚುನಾವಣೆಯಲ್ಲಿ ರೈತರ ಸಮಸ್ಯೆಗಳನ್ನ ಮುಂದಿಟ್ಟುಕೊಂಡು ಎಲೆಕ್ಷನ್ ಎದುರಿಸುವುದಾಗಿ ವೈಶಾಲಿ ಹೇಳಿದ್ದಾರೆ.
ಈಗಾಗಲೇ ಈ ಕ್ಷೇತ್ರದಲ್ಲಿ ಐದು ಸಾವಿರ ಕಾರ್ಯಕರ್ತರು ಕ್ಯಾಂಪೇನ್ ಆರಂಭ ಮಾಡಿದ್ದು, ಮಾರ್ಚ್ 23ರಂದು ವೈಶಾಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಮಹಾರಾಷ್ಟ್ರದಲ್ಲಿ ಏಪ್ರಿಲ್ 10,17 ಹಾಗೂ 24ರಂದು ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರಬೀಳಲಿದೆ.