ದೆಹಲಿ: ಕೋವಿಡ್ ಬಿಕ್ಕಟ್ಟಿನ ಮಧ್ಯೆ ಘೋಷಣೆಯಾಗಿರುವ ಚುನಾವಣೆಗಳಿಗೆ ಅಭ್ಯರ್ಥಿಗಳ ಚುನಾವಣಾ ವೆಚ್ಚ ಮಿತಿಯನ್ನು ಶೇ10 ರಷ್ಟು ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ ನಿರ್ಬಂಧಗಳಿಂದಾಗಿ ಅವರು ಎದುರಿಸಬಹುದಾದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಚಾರಕ್ಕಾಗಿ ಹೆಚ್ಚು ಹಣ ವ್ಯಯಿಸಲು ಅನುಮತಿಸಲಾಗಿದೆ.
ಸರ್ಕಾರದ ಈ ನಿರ್ಧಾರ ಬಿಹಾರ ಎಲೆಕ್ಷನ್ ಹಾಗೂ ಲೋಕಸಭಾ ಮತ್ತು 59 ವಿಧಾನಸಭಾ ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಗೆ ಸಹಕಾರಿಯಾಗಲಿದೆ. ಕಳೆದ ಒಂದು ತಿಂಗಳ ಹಿಂದೆ ಕೋವಿಡ್ ಸಮಯದಲ್ಲಿ ನಡೆಯುತ್ತಿರುವ ಎಲ್ಲ ಚುನಾವಣಾ ವೆಚ್ಚಗಳನ್ನ ಶೇ 10 ರಷ್ಟು ಹೆಚ್ಚಿಸುವಂತೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಕಾನೂನು ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಅಭ್ಯರ್ಥಿಯೊಬ್ಬರು ಗರಿಷ್ಠ 77 ಲಕ್ಷ ರೂಪಾಯಿ ವ್ಯಯಿಸಬಹುದು. ಈವರೆಗೂ 70 ಲಕ್ಷ ರೂಪಾಯಿ ಖರ್ಚು ಮಾಡಬಹುದಿತ್ತು. ವಿಧಾನಸಭಾ ಚುನಾವಣಾ ಕ್ಯಾಂಪೇನ್ಗೆ ವ್ಯಯದ ಮಿತಿಯನ್ನ 20 ಲಕ್ಷ ರೂಪಾಯಿಯಿಂದ 30 ಲಕ್ಷದ 8 ಸಾವಿರ ರೂಪಾಯಿಗೆ ಏರಿಸಲಾಗಿದೆ. ಇದು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಾ ಹೋಗುತ್ತದೆ.
ಈ ನಿಯಮ ಅಧಿಕೃತ ಗೆಜೆಟ್ನಲ್ಲಿ ನಮೂದಿಸಲಾಗಿರುವ ದಿನಾಂಕದಿಂದ ಜಾರಿಗೆ ಬರಲಿದ್ದು, ಕೇಂದ್ರ ಸೂಚಿಸಿರುವ ದಿನಾಂಕದವರೆಗೆ ಜಾರಿಯಲ್ಲಿರುತ್ತದೆ. ಈ ಹಿಂದೆ 2014 ರ ಲೋಕಸಭಾ ಚುನಾವಣಾ ಸಮಯದಲ್ಲಿ ಖರ್ಚು ಮಿತಿಯನ್ನ ಹೆಚ್ಚಿಸಲಾಗಿತ್ತು.
ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಬಿಹಾರ ವಿಧಾನಸಭಾ ಚುನಾವಣೆ, ಮಣಿಪುರ ಹಾಗೂ ಕರ್ನಾಟಕದಲ್ಲಿ ಕೆಲವು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.