ಶ್ರೀನಗರ (ಜಮ್ಮು ಕಾಶ್ಮೀರ):ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಮತ್ತೆ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ. ವಿಶ್ವಸಂಸ್ಥೆಯ 74ನೇ ಮಹಾ ಅಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ರ ಭಾಷಣದ ಬಳಿಕ ಪ್ರತಿಭಟನೆ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಶುಕ್ರವಾರ ವಿಶ್ವಸಂಸ್ಥೆ ಅಧಿವೇಶನದಲ್ಲಿ ಮಾತನಾಡಿದ್ದ ಪಾಕ್ ಪ್ರಧಾನಿ, ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂಬುದು ನಿಮಗೆಲ್ಲ ಗೊತ್ತೇ ಇದೆ. ಮಾನವ ಹಕ್ಕುಗಳ ಆಯೋಗ ಲಕ್ಷ ಲಕ್ಷ ಸಾವುಗಳ ಬಗ್ಗೆ ಹೇಳಿದೆ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಭಾರತ-ಪಾಕಿಸ್ತಾನ ಪರಮಾಣು ದೇಶಗಳಾಗಿದ್ದು, ಒಂದು ವೇಳೆ ಯುದ್ಧ ಖಚಿತವಾದರೆ ಇದರಿಂದ ವಿಶ್ವದ ಸರ್ವನಾಶ ಖಚಿತ. ನಾವು ಸೋಲು ಕಾಣಬಹುದು. ಆದರೆ, ಕೊನೆ ಉಸಿರು ಇರುವವರೆಗೂ ಹೋರಾಟ ನಡೆಸುತ್ತೇವೆ ಎಂದೆಲ್ಲ ಹೇಳಿದ್ದರು.
ಇನ್ನು, ಇಮ್ರಾನ್ ಭಾಷಣದ ಕೆಲಹೊತ್ತಲ್ಲೇ ಕಾಶ್ಮೀರದಲ್ಲಿ ನೂರಾರು ಜನರು ಮನೆಯಿಂದ ಹೊರಬಂದು ಪಾಕ್ ಪ್ರಧಾನಿಯನ್ನು ಬೆಂಬಲಿಸಿ ಜೈಕಾರ ಕೂಗಿದ್ದರು ಎನ್ನಲಾಗಿದೆ. ಹೀಗಾಗಿ ಮುಂದೆ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಶನಿವಾರದಿಂದ ಮತ್ತೆ ನಿರ್ಬಂಧ ಹಾಗೂ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೆ ಶ್ರೀನಗರದ ಕೆಲ ಭಾಗಗಳಲ್ಲಿ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ನಿರ್ಬಂಧದ ಕುರಿತಂತೆ ತಿಳಿಸಲಾಗಿದೆ. ಅಲ್ಲದೆ ಭದ್ರತೆ ದೃಷ್ಟಿಯಿಂದ ಹೆಚ್ಚಿನ ಸೈನಿಕರನ್ನು ನಿಯೋಜನೆ ಮಾಡಲಾಗಿದೆ.