ನವದೆಹಲಿ: ದೇಶದಲ್ಲಿ ಹೇರಿಕೆ ಮಾಡಿರುವ ಲಾಕ್ಡೌನ್ 3.0 ಮೇ. 17ಕ್ಕೆ ಮುಕ್ತಾಯಗೊಳ್ಳಲಿದೆ. ಇದೇ ವಿಷಯವಾಗಿ ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾಡುವ ಭಾಷಣ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಕೊರೊನಾ ವೈರಸ್ ಕಾರಣ ದೇಶದಲ್ಲಿ ಮೂರನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದು, ಅದು ಮುಕ್ತಾಯಗೊಳ್ಳಲು ಕೇವಲ ಐದು ದಿನಗಳು ಬಾಕಿ ಉಳಿದಿವೆ. ಈ ಕುರಿತಾಗಿ ನಿನ್ನೆ ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದುಕೊಂಡಿದ್ದರು.
ಪ್ರಧಾನಿ ಭಾಷಣದ ಹಿನ್ನೆಲೆಯಲ್ಲಿ, ದೇಶದಲ್ಲಿ ಲಾಕ್ಡೌನ್ 4.0 ಜಾರಿಯಾಗುತ್ತಾ? ಹೊಸ ಕಾರ್ಯಸೂಚಿ ಜತೆ ಲಾಕ್ಡೌನ್ ಸಡಿಲಿಕೆಯಾಗುವುದೇ? ಎಂಬ ಮಾತುಗಳು ಸದ್ಯ ಎಲ್ಲೆಡೆ ಕೇಳಿ ಬರುತ್ತಿವೆ.
ನಿನ್ನೆ ನಡೆದ ವಿಡಿಯೋ ಕಾನ್ಫರೆನ್ಸ್ ವೇಳೆ ಕೆಲ ರಾಜ್ಯಗಳು ಲಾಕ್ಡೌನ್ ಸಡಿಲಿಕೆ ಮಾಡುವಂತೆ ಪ್ರಾಧಾನಿಗಳಲ್ಲಿ ಮನವಿ ಮಾಡಿಕೊಂಡಿದ್ದು, ಕೇವಲ ನಿರ್ಬಂಧಿತ ವಲಯಗಳಲ್ಲಿ ಕರ್ಫ್ಯೂ ವಿಧಿಸಿ, ಉಳಿದೆಡೆ ಆರ್ಥಿಕ ಚಟುವಟಿಕೆ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿವೆ.
ದೇಶದಲ್ಲಿ ಈಗಾಗಲೇ ಕೊರೊನಾವೃತ ಪ್ರದೇಶಗಳನ್ನು ಹಸಿರು, ಕಿತ್ತಳೆ, ಕೆಂಪು ವಲಯಗಳೆಂದು ವರ್ಗೀಕರಿಸಲಾಗಿದೆ. ಈ ವರ್ಗೀಕರಣಕ್ಕೆ ಅನುಗುಣವಾಗಿ ಲಾಕ್ ಡೌನ್ ಸಡಿಲಿಕೆ ನೀಡಲಾಗಿದೆ.