ನವದೆಹಲಿ: ವಿಡಿಯೋ ಕಾನ್ಫರೆನ್ಸ್ ಮೂಲಕ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಆಸ್ತಿ ಕಾರ್ಡ್ ವಿತರಿಸುವ 'ಸ್ವಾಮಿತ್ವ' ಯೋಜನೆಗೆ ಅಕ್ಟೋಬರ್ 11ರಂದು ಚಾಲನೆ ನೀಡಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ವರ್ಷಗಳಿಂದ ವಾಸ ಮಾಡಿರುವ ತಮ್ಮ ಜಾಗದ ದಾಖಲೆ ಹೊಂದಿರದವರಿಗೆ ಹಕ್ಕುಪತ್ರ ನೀಡುವ ಯೋಜನೆ ಇದಾಗಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡುವ ದಿನವೇ ಒಂದು ಲಕ್ಷ ಜನರು ತಮ್ಮ ಆಸ್ತಿ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ. ಆರು ರಾಜ್ಯಗಳಿಂದ ಒಟ್ಟು 763 ಗ್ರಾಮಗಳು ಇದರಲ್ಲಿ ಭಾಗಿಯಾಗುತ್ತಿದ್ದು, ಉತ್ತರ ಪ್ರದೇಶದಿಂದ 346 ಗ್ರಾಮ, ಹರಿಯಾಣದಿಂದ 221 ಗ್ರಾಮ, ಮಹಾರಾಷ್ಟ್ರದಿಂದ 100 ಗ್ರಾಮ ಹಾಗೂ ಮಧ್ಯಪ್ರದೇಶದಿಂದ 44 ಗ್ರಾಮ ಹಾಗೂ ಉತ್ತರಾಖಂಡ ಹಾಗೂ ಕರ್ನಾಟಕದಿಂದ ತಲಾ ಎರಡು ಗ್ರಾಮಗಳು ಆಯ್ಕೆಯಾಗಿವೆ.
ಆರಂಭದಲ್ಲಿ ಕರ್ನಾಟಕ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳ್ಳಲಿದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ 5 ಜಿಲ್ಲೆಯ 83 ಗ್ರಾಮ ಯೋಜನೆಗೆ ಆಯ್ಕೆಯಾಗಿವೆ.
ಏನೆಲ್ಲ ಲಾಭ!?
ಬ್ಯಾಂಕ್ಗಳಲ್ಲಿ ಸಾಲ ಪಡೆದುಕೊಳ್ಳಲು ಸೇರಿದಂತೆ ವಿವಿಧ ಅವಶ್ಯಕ ಕೆಲಸಗಳಿಗೆ ಈ ಕಾರ್ಡ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡಿರುವ ಜನರ ಮೊಬೈಲ್ಗಳಿಗೆ ಎಸ್ಎಂಎಸ್ ಬರಲಿದ್ದು, ಅದರಲ್ಲಿರುವ ಲಿಂಕ್ ಬಳಕೆ ಮಾಡಿಕೊಂಡು ತಮ್ಮ ಆಸ್ತಿ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಗ್ರಾಮೀಣ ಭಾಗದಲ್ಲಿ ಮಾಲೀಕರಿಗೆ ಆಸ್ತಿ ಹಕ್ಕು ಕಾರ್ಡ್ ನೀಡುವುದೇ ಈ ಯೋಜನೆ ಉದ್ದೇಶವಾಗಿದ್ದು, ಮುಂದಿನ ನಾಲ್ಕು ವರ್ಷ ಒಟ್ಟು 6.62ಲಕ್ಷ ಗ್ರಾಮಗಳು ಈ ಯೋಜನೆಗೆ ಒಳಪಡಲಿವೆ.