ನವದೆಹಲಿ: ಪ್ರಪಂಚದಾದ್ಯಂತ ಮಹಾಮಾರಿ ಕೊರೊನಾ ಆರ್ಭಟ ಜೋರಾಗಿದ್ದು, ಈಗಾಗಲೇ ಅನೇಕರ ಜನರ ಪ್ರಾಣ ಪಡೆದುಕೊಂಡಿದೆ. ದೇಶದಲ್ಲೂ ಈಗಾಗಲೇ 160ಕ್ಕೂ ಹೆಚ್ಚು ಜನರು ಈ ವೈರಾಣುವಿನಿಂದ ಬಳಲುತ್ತಿದ್ದು, ಅದರಿಂದ ಹೊರಬರಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜನತಾ ಕರ್ಪ್ಯೂ ಆಚರಣೆ ಮಾಡಲು ನಮೋ ಈಗಾಗಲೇ ಕರೆ ನೀಡಿದ್ದು, ಇದರ ಬೆನ್ನಲ್ಲೇ ಇಂದು ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ನಮೋ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಇಂದು ಸಂಜೆ ಪ್ರಧಾನಿ ಮೋದಿ ವಿಡಿಯೋ ಸಂವಾದ ನಡೆಸಲಿದ್ದು, ಆಯಾ ರಾಜ್ಯಗಳಲ್ಲಿ ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಲು ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ಮಾಹಿತಿ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ದೇಶದ ಪ್ರತಿಯೊಬ್ಬ ನಾಗರೀಕರು ಕೊರೊನಾ ಮಹಾಮಾರಿ ಕುರಿತು ಎಚ್ಚರದಿಂದ ಇರುವಂತೆ ಈಗಾಗಲೇ ನಮೋ ಕರೆ ನೀಡಿದ್ದು, ಮಾರ್ಚ್ 22ರಂದು ಯಾವುದೇ ಕಾರಣಕ್ಕೂ ಜನರು ಮನೆಯಿಂದ ಹೊರಬರದಂತೆ ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಇಂದು ನಮೋ ನಡೆಸುವ ಸಂವಾದ ಕೂಡ ಮಹತ್ವ ಪಡೆದುಕೊಂಡಿದೆ.