ದಾವಣಗೆರೆ: ಜಿಲ್ಲೆಯಲ್ಲಿ ಸಹಜ ಹೆರಿಗೆಗಳಿಗಿಂತ ಸಿಸೇರಿಯನ್ ಹೆರಿಗೆಗಳ ಪ್ರಮಾಣ ಹೆಚ್ಚಿದೆ ಎಂದು ಡಿಹೆಚ್ಓ ಷಣ್ಮುಖಪ್ಪ .ಎಸ್. ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಚಿಗಟೇರಿ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಸೇರಿಯನ್ ಪ್ರಮಾಣ ಶೇ. 40ರಷ್ಟಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಶೇ. 72 ರಷ್ಟಿರುವ ವರದಿಯನ್ನು ಗಮನಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದಂಗಾಗಿದ್ದಾರೆ. ಸಿಸೇರಿಯನ್ ಹೆರಿಗೆ ಪ್ರಮಾಣ ಕಂಡು ಆರೋಗ್ಯ ಇಲಾಖೆ ಸಭೆ ಕರೆಯಲು ಚಿಂತಿಸಿದೆ. ಅಲ್ಲದೆ ಖಾಸಗಿ ಆಸ್ಪತ್ರೆ ಅವರನ್ನು ಕರೆದು ಸಿಸೇರಿಯನ್ ಪ್ರಮಾಣ ಕಡಿಮೆ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಡಿಹೆಚ್ಓ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ದಾವಣಗೆರೆಯ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಉತ್ತಮ ಆಸ್ಪತ್ರೆ ವ್ಯವಸ್ಥೆ ಇಲ್ಲದ ಕಾರಣ ಚಿಕಿತ್ಸೆಗಾಗಿ ಜನಸಾಮಾನ್ಯರು ಬೆಣ್ಣೆನಗರಿಗೆ ಆಗಮಿಸುವುದು ಸಾಮಾನ್ಯ. ಆದರೆ ಹೆರಿಗೆ ವಿಚಾರದಲ್ಲಿ ದಾವಣಗೆರೆಯಲ್ಲಿ ಸಹಜ ಹೆರಿಗೆಗಳಿಗಿಂತ ಸಿಸೇರಿಯನ್ ಹೆರಿಗೆಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ.
ಡಿಹೆಚ್ಓ ಷಣ್ಮುಖಪ್ಪ .ಎಸ್. ಅವರು ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿ "ಖಾಸಗಿ ಆಸ್ಪತ್ರೆಗಳಲ್ಲಿ ಎಪ್ರಿಲ್ - ಅಕ್ಟೋಬರ್ ತನಕ ಒಟ್ಟು ತಿಂಗಳಲ್ಲಿ ಒಟ್ಟು 4291 ಹೆರಿಗೆಗಳ ಪೈಕಿ 3093 ಸಿಸೇರಿಯನ್ ಹೆರಿಗೆಗಳು ವರದಿ ಆಗಿವೆ. ಚಿಗಟೇರಿ ಆಸ್ಪತ್ರೆ, ಮಹಿಳಾ ಮಕ್ಕಳ ಆಸ್ಪತ್ರೆಯಲ್ಲಿ ಎಪ್ರಿಲ್-ಅಕ್ಟೋಬರ್ ತನಕ 7,676 ಹೆರಿಗೆಗಳ ಪೈಕಿ ಒಟ್ಟು 3,079 ಸಿಸೇರಿಯನ್ ಹೆರಿಗೆಗಳು ಆಗಿವೆ. ಖಾಸಗಿ ಆಸ್ಪತ್ರೆ ಹಾಗು ಸರ್ಕಾರಿ ಆಸ್ಪತ್ರೆ ಸೇರಿಸಿ ಏಳು ತಿಂಗಳಲ್ಲಿ 6172 ಸಿಸೇರಿಯನ್ ಹೆರಿಗೆಗಳು ವರದಿ ಆಗಿವೆ. ಎಲ್ಲಾ ಖಾಸಗಿ ಆಸ್ಪತ್ರೆಯವರಿಗೆ ಕರೆದು ಒಂದು ಸಭೆ ಮಾಡಿ, ಅ ಸಭೆಯಲ್ಲಿ ಸಿಸೇರಿಯನ್ ಪ್ರಮಾಣ ಏಕೆ ಹೆಚ್ಚಾಗುತ್ತಿದೆ ಎಂಬುದಕ್ಕೆ ಕೂಲಂಕಷವಾಗಿ ಚರ್ಚಿಸಿ ಎಚ್ಚರಿಕೆ ನೀಡುತ್ತೇವೆ. ಅಲ್ಲದೆ ಈ ಸಂಖ್ಯೆಯನ್ನು ಕಡಿಮೆ ಮಾಡಲು ಕ್ರಮ ವಹಿಸುತ್ತೇವೆ" ಎಂದರು.
ದಾವಣಗೆರೆ ಜಿಲ್ಲೆಯ ತಾಲೂಕುವಾರು ಸರ್ಕಾರಿ ಆಸ್ಪತ್ರೆಗಳ ಅಂಕಿ-ಅಂಶಗಳು ಹೀಗಿದೆ;
- ದಾವಣಗೆರೆ- 2,895 ಒಟ್ಟು ಹೆರಿಗೆಗಳ ಪೈಕಿ, 1,256 ಸಿಸೇರಿಯನ್. ಶೇಕಡಾವಾರು 43 ಹೆರಿಗೆಗಳು
- ಹರಿಹರ- 1,245 ಒಟ್ಟು ಹೆರಿಗೆಗಳ ಪೈಕಿ 550 ಸಿಸೇರಿಯನ್. ಶೇಕಡಾವಾರು 44 ಹೆರಿಗೆಗಳು
- ಜಗಳೂರು- 1,102 ಒಟ್ಟು ಹೆರಿಗೆಗಳ ಪೈಕಿ 394 ಸಿಸೇರಿಯನ್. ಶೇಕಡಾವಾರು 36 ಹೆರಿಗೆಗಳು
- ಚನ್ನಗಿರಿ- 1,284 ಒಟ್ಟು ಹೆರಿಗೆಗಳ ಪೈಕಿ 462 ಸಿಸೇರಿಯನ್. ಶೇಕಡವಾರು 36 ಹೆರಿಗೆಗಳು
- ಹೊನ್ನಾಳಿ: 1,150 ಒಟ್ಟು ಹೆರಿಗೆಗಳ ಪೈಕಿ, 417 ಸಿಸೇರಿಯನ್. ಶೇಕಡವಾರು 36 ಹೆರಿಗೆಗಳು
- ಒಟ್ಟು ಹೆರಿಗೆಗಳು 7,676. 3,079 ಸಿಸೇರಿಯನ್ ಹೆರಿಗೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ವರದಿ ಆಗಿವೆ.
ಇದನ್ನೂ ಓದಿ: ಗರ್ಭಿಣಿ, ನವಜಾತ ಶಿಶುವಿನ ತಾಯಂದಿರಿಗೆ 'ಕಿಲ್ಕಾರೀ ಮೊಬೈಲ್' ಸೇವೆ: ಏನಿದು ಹೊಸ ಯೋಜನೆ?