ಲಕ್ನೋ(ಉತ್ತರ ಪ್ರದೇಶ): ಸಂಭಾಲ್ ಹಿಂಸಾಚಾರದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಉಂಟಾದ ನಷ್ಟದ ಪರಿಹಾರವನ್ನು ಪ್ರತಿಭಟನಾಕಾರರಿಂದಲೇ ವಸೂಲು ಮಾಡಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಹಿಂಸಾಚಾರದಲ್ಲಿ ಕಲ್ಲು ತೂರಾಟ ನಡೆಸಿ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಪ್ರತಿಭಟನಾಕಾರರ ಫೋಟೊಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಘರ್ಷಣೆ ನಡೆದಿದ್ದೇಕೆ?: ನ್ಯಾಯಾಲಯದ ಆದೇಶದ ಮೇರೆಗೆ ನಗರದ ಕೋಟ್ ಗರ್ವಿ ಪ್ರದೇಶದ ಶಾಹಿ ಜಾಮಾ ಮಸೀದಿಯ ಸರ್ವೇ ಕಾರ್ಯ ನಡೆಸುತ್ತಿರುವ ಸಂದರ್ಭದಲ್ಲಿ ಭಾನುವಾರ ಭುಗಿಲೆದ್ದ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಪೊಲೀಸರು ಸೇರಿದಂತೆ ಹಲವಾರು ಜನ ಗಾಯಗೊಂಡಿದ್ದಾರೆ.
ಯೋಗಿ ಸರ್ಕಾರದಿಂದ ಕಠಿಣ ಕ್ರಮ: "ಸಂಭಾಲ್ ಹಿಂಸಾಚಾರದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಯುಪಿ ಸರ್ಕಾರ ಕಠಿಣ ನಿಲುವು ತಳೆದಿದೆ. ಕಲ್ಲು ತೂರಾಟಗಾರರು ಮತ್ತು ದುಷ್ಕರ್ಮಿಗಳ ಪೋಸ್ಟರ್‌ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುವುದು ಮತ್ತು ನಷ್ಟದ ಪರಿಹಾರವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. ಪ್ರತಿಭಟನಾಕಾರರನ್ನು ಬಂಧಿಸಲು ಸಹಾಯಕವಾಗುವಂಥ ಮಾಹಿತಿ ನೀಡಿದವರಿಗೆ ಬಹುಮಾನವನ್ನು ಸಹ ಘೋಷಿಸಬಹುದು" ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಈ ಹಿಂದೆ 2020ರಲ್ಲಿ ಕೂಡ ಸಿಎಎ ವಿರೋಧಿ ಪ್ರತಿಭಟನೆಯ ಸಮಯದಲ್ಲಿ ಉತ್ತರ ಪ್ರದೇಶ ಸರ್ಕಾರ ಪ್ರತಿಭಟನಾಕಾರರ ಚಿತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿತ್ತು. ರಾಜ್ಯ ರಾಜಧಾನಿ ಸೇರಿದಂತೆ ಹಲವಾರು ಸ್ಥಳಗಳಲ್ಲಿ ದುಷ್ಕರ್ಮಿಗಳ ಪೋಸ್ಟರ್‌ಗಳನ್ನು ಸರ್ಕಾರ ಪ್ರದರ್ಶಿಸಿತ್ತು. ಆದರೆ ನ್ಯಾಯಾಲಯದ ಆದೇಶದ ನಂತರ ಇವನ್ನು ತೆಗೆದುಹಾಕಲಾಗಿತ್ತು.
ಭಾನುವಾರ ಸಂಭಾಲ್ನಲ್ಲಿ ಸಮೀಕ್ಷಾ ತಂಡವು ತನ್ನ ಕೆಲಸವನ್ನು ಪುನರಾರಂಭಿಸುತ್ತಿದ್ದಂತೆ ಮಸೀದಿಯ ಬಳಿ ದೊಡ್ಡ ಜನಸಮೂಹ ಜಮಾಯಿಸಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿತ್ತು. ನಂತರ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆಗಿಳಿದು ವಾಹನಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದಾಗ ಪರಿಸ್ಥಿತಿ ಉಲ್ಬಣಗೊಂಡಿತು.
ಎಸ್‌ಪಿ ಸಂಸದ, ಶಾಸಕನ ವಿರುದ್ಧ ಆರೋಪ: ಈವರೆಗೆ ಪೊಲೀಸರು 25 ಜನರನ್ನು ಬಂಧಿಸಿದ್ದು, ಏಳು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಸಂಭಾಲ್ನ ಸಮಾಜವಾದಿ ಪಕ್ಷದ ಸಂಸದ ಜಿಯಾ-ಉರ್-ರೆಹಮಾನ್ ಬರ್ಕ್, ಪಕ್ಷದ ಸ್ಥಳೀಯ ಶಾಸಕ ಇಕ್ಬಾಲ್ ಮೆಹಮೂದ್ ಅವರ ಪುತ್ರ ಸೊಹೈಲ್ ಇಕ್ಬಾಲ್ ಮತ್ತು 2,750ಕ್ಕೂ ಹೆಚ್ಚು ಅಪರಿಚಿತ ಶಂಕಿತರ ವಿರುದ್ಧ ಆರೋಪ ಹೊರಿಸಲಾಗಿದೆ.
ಘಟನೆಯ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆ ನಡೆಯುತ್ತಿದ್ದು, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಕುಮಾರ್ ವಿಷ್ಣೋಯ್ ಸೋಮವಾರ ಹೇಳಿದ್ದಾರೆ. ಅಶಾಂತಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಇದನ್ನೂ ಓದಿ : ರಾಹುಲ್ ಗಾಂಧಿ ಪೌರತ್ವ ವಿವಾದ: ಮಾಹಿತಿ ನೀಡಲು ಕೇಂದ್ರ ಸರ್ಕಾರಕ್ಕೆ ಲಖನೌ ಕೋರ್ಟ್ ಸೂಚನೆ