ನವದೆಹಲಿ: ಕೊರೊನಾ ವೈರಸ್ ಬಿಕ್ಕಟ್ಟನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉತ್ತಮವಾಗಿ ನಿಭಾಯಿಸಲಿದೆ ಎಂದು 93.6 ರಷ್ಟು ಭಾರತೀಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಮಾರ್ಚ್ 16 ರಿಂದ ಏಪ್ರಿಲ್ 20ರ ವರೆಗೆ ಐಎಎನ್‌ಎಸ್-ಸಿವೋಟರ್ ಕೋವಿಡ್ ಟ್ರ್ಯಾಕರ್ 2020 ನಡೆಸಿದ ಸಮೀಕ್ಷೆ ಪ್ರಕಾರ ಜನರು ಸರ್ಕಾರದ ಮೇಲೆ ನಂಬಿಕೆ ಇರಿಸಿರುವುದು ಕಂಡುಬಂದಿದೆ. ಕೇವಲ 4.7 ರಷ್ಟು ಜನರು ಸರ್ಕಾದ ಮೇಲೆ ನಂಬಿಕೆ ಇರಿಸಿಲ್ಲ ಎಂದು ಸಮೀಕ್ಷೆ ಹೇಳಿದೆ.
ಸಮೀಕ್ಷೆಯಲ್ಲಿ ಶೇಕಡಾ 42.9 ರಷ್ಟು ಜನರು, ಏಪ್ರಿಲ್ 20ರ ವೇಳೆಗೆ, 3 ವಾರಗಳಿಗಿಂತ ಹೆಚ್ಚು ಕಾಲ ಬರುವಷ್ಟು ಪಡಿತರ ಮತ್ತು ಔಷದಗಳನ್ನು ಸಂಗ್ರಹಿಸಿಟ್ಟುಕೊಂಡಿರುವುದು ಕಂಡು ಬಂದಿದೆ. ಆದರೆ, ಮಾರ್ಚ್ 16ರ ನಂತರ 90 ರಷ್ಟು ಜನ ಹೆಚ್ಚು ದಿನಗಳಿಗಾಗುವಷ್ಟು ಪಡಿತರ ಹೊಂದಿಲ್ಲ ಎಂದು ಹೇಳಲಾಗಿದೆ.
ಏಪ್ರಿಲ್ 20ರ ವೇಳೆಗೆ 41.1 ರಷ್ಟು ಜನರು ತಾವು ಅಥವಾ ತಮ್ಮ ಕುಟುಂಬದಲ್ಲಿ ಯಾರಾದರೂ ಕೊರೊನಾ ಸೋಂಕಿಗೆ ತುತ್ತಾಗಬಹುದೆಂದು ಒಪ್ಪುತ್ತಾರೆ. 56.3 ರಷ್ಟು ಮಂದಿ ತಮಗೆ ಸೋಂಕು ತಗುಲುವುದಿಲ್ಲ ಎಂಬ ವಿಶ್ವಾಸ ಹೊಂದಿದ್ದಾರೆ ಎಂದು ಹೇಳಿದೆ. ಆದರೆ ಸಮೀಕ್ಷೆಯ ಆರಂಭದಲ್ಲಿ, ಕೇವಲ 35.1 ರಷ್ಟು ಜನರು ಮಾತ್ರ ತಮಗೂ ಸೋಂಕು ತಗಲಬಹುದೆಂದು ಭಾವಿಸಿದ್ದರು ಎಂದು ತಿಳಿಸಿದೆ.