ನವದೆಹಲಿ: ಜೈಷೆ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಹಿಂದೇಟು ಹಾಕುತ್ತಾ, ಪಾಕ್ನ ಬೆನ್ನಿಗೆ ನಿಂತಿದ್ದ ಚೀನಾ ಇದೀಗ ತನ್ನ ಕರಾಳ ಮುಖ ತೋರಿಸಿದೆ. ಪಾಕ್ಗೆ ಅತ್ಯಾಧುನಿಕ ಡ್ರೋನ್ಗಳನ್ನು ಮಾರಲು ಮುಂದಾಗಿದ್ದು, ಭಾರತದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ.
ತನ್ನ ಅತ್ಯಾಧುನಿಕ ಡ್ರೋನ್ಗಳಾದ 'Rainbow'ಗಳನ್ನು ಪಾಕ್ಗೆ ಮಾರಾಟ ಮಾಡುವ ಮೂಲಕ ಚೀನಾ ಬಹಿರಂಗವಾಗಿಯೇ ಬೆಂಬಲ ಸೂಚಿಸಿದೆ. ಪಾಕ್ ಆಕ್ರಮಿತ ಪ್ರದೇಶ ಬಾಲಕೋಟ್ನಲ್ಲಿ ಭಾರತೀಯ ವಾಯುಪಡೆ ನಡೆಸಿದ ಏರ್ಸ್ಟ್ರೈಕ್ ನಂತರ ತನ್ನ Rainbow CH-4 ಹಾಗೂ CH5ಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ದಿಢೀರ್ ದಾಳಿ ನಂತರ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ತನ್ನ ಗಡಿ ಸುತ್ತಲೂ ಕಾಣ್ಗಾವಲು ಇರಿಸಲು, ಡ್ರೋನ್ಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಪಾಕ್ಗೆ ಬೆಂಗಾವಲಾಗಿ ನಿಂತಿರುವ ಚೀನಾ ಇದಕ್ಕೆ ಸಹಾಯ ನೀಡಲು ಮುಂದಾಗಿದೆ.
CH-4 ಡ್ರೋನ್ 400 ಕೆಜಿಯಷ್ಟು ಸ್ಫೋಟಕಗಳನ್ನು ಹೊತ್ತೊಯ್ಯುವ, 40 ಗಂಟೆಗಳ ಕಾಲ ಗಾಳಿಯಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿದೆ. 5 ಸಾವಿರ ಕಿಮೀವರೆಗೆ ತನ್ನ ವ್ಯಾಪ್ತಿ ಹೊಂದಿದೆ. ಹಾಗೆಯೇ CH-5 1000 ಕೆಜಿ ಸ್ಫೋಟಕಗಳನ್ನು ಹೊತ್ತೊಯ್ಯುವ, 60 ಗಂಟೆಗಳ ಕಾಲ ಗಾಳಿಯಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿದೆ. ಇದು 17 ಸಾವಿರ ಅಡಿ ಎತ್ತರದಲ್ಲಿ ಹಾರಾಡಲಿದೆ ಎಂದು ತಿಳಿದುಬಂದಿದೆ.
ಇವುಗಳ ಮೂಲಕ ಭಾರತದ ವಾಯು ನೆಲೆ ಮೇಲೆ ದಾಳಿ ಮಾಡಲು ಸುಲಭವಾಗುತ್ತದೆ ಎಂದು ಪಾಕ್ ರಕ್ಷಣಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.