ಅಮರಾವತಿ (ಆಂಧ್ರಪ್ರದೇಶ): ಆಂಧ್ರಪ್ರದೇಶ ಪೊಲೀಸರ 'ಆಪರೇಷನ್ ಮುಸ್ಕಾನ್ ಕೋವಿಡ್ -19' ಅಭಿಯಾನದ ಪರಿಣಾಮವಾಗಿ ನಾಲ್ಕು ವರ್ಷಗಳ ಬಳಿಕ ಆಂಧ್ರಪ್ರದೇಶದಲ್ಲಿ ತಾಯಿ-ಮಗ ಮತ್ತೆ ಒಂದಾಗಿದ್ದಾರೆ.
ಬಿಕ್ಕಟ್ಟಿನ ಹಂತದಲ್ಲಿ ತೊಂದರೆಗೀಡಾದ ಮಕ್ಕಳಿಗೆ ಸಹಾಯ ಪೂರೈಸಲು ಆಂಧ್ರಪ್ರದೇಶದ ಡಿಜಿಪಿ ಗೌತಮ್ ಸಾವಂಗ್ ಈ ಪ್ರಮುಖ ಅಭಿಯಾನಕ್ಕೆ ವಿಶೇಷ ಚಾಲನೆ ನೀಡಿದ್ದರು.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಲ್ಲು ನಿವಾಸಿ ಬಾಬ್ಬಾ ಶ್ರೀ ಲಲಿತಾ ತನ್ನ ಎರಡನೇ ಮಗ ಶ್ರೀನಿವಾಸ್ ಜನಿಸಿದ ಕೂಡಲೇ ಗಂಡನನ್ನು ಕಳೆದುಕೊಂಡಿದ್ದರು. ಮಕ್ಕಳನ್ನು ಸಾಕಲು ವಿವಿಧ ಕೆಲಸಗಳನ್ನು ಆಕೆ ಆಶ್ರಯಿಸಬೇಕಾಯಿತು. ಕೆಲವೊಮ್ಮೆ ತನ್ನ ಪುತ್ರರಿಗೆ ಆಹಾರ ಒದಗಿಸಲು ಚಿಂದಿ ಆಯುವ ಕೆಲಸ ಸಹ ಮಾಡುತ್ತಿದ್ದರು.
2016ರಲ್ಲಿ ಶ್ರೀನಿವಾಸ್, ಪಾಲಕೋಲುವಿನಲ್ಲಿ ರೈಲು ಹತ್ತಿ ವಿಜಯವಾಡ ರೈಲು ನಿಲ್ದಾಣದಲ್ಲಿ ಇಳಿದಿದ್ದನು. ರೈಲ್ವೆ ಪೊಲೀಸರು ಶ್ರೀನಿವಾಸ್‌ನನ್ನು ರಕ್ಷಿಸಿ ವಿಜಯವಾಡದಲ್ಲಿರುವ ಮಕ್ಕಳ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿದ್ದರು.
ಶ್ರೀನಿವಾಸ್ ತಾನು ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಲು ಮೂಲದವನು ಎಂದು ಬಹಿರಂಗಪಡಿಸಿದ್ದ. ವಿಜಯವಾಡದ ಅಧಿಕಾರಿಗಳು ಪಾಲಕೊಲು ಅಧಿಕಾರಿಗಳಿಗೆ ತಿಳಿಸಿದಾಗ ಅವರು, ಮಗುವಿನ ತಾಯಿಯನ್ನ ಹುಡುಕುವ ಕಾರ್ಯಾಚರಣೆ ನಡೆಸಿ, ತಾಯಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಅಂತಿಮವಾಗಿ ನಾಲ್ಕು ವರ್ಷಗಳ ಬಳಿಕ ತಾಯಿ - ಮಗ ಒಂದಾಗಿದ್ದಾರೆ.
"ಸುಮಾರು 4 ವರ್ಷಗಳ ನಂತರ ತಾಯಿ-ಮಗ ಒಂದಾಗಿರುವುದು ಖುಷಿ ನೀಡಿದೆ. ಈ ರೀತಿಯ ವಿಷಯಗಳು ನಮಗೆ ಅಪಾರ ತೃಪ್ತಿಯನ್ನು ನೀಡುತ್ತವೆ. ಇದು ನಮ್ಮ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಲು ಮತ್ತಷ್ಟು ಪ್ರೇರಣೆ ನೀಡಿದೆ. ಯೋಜನೆಯನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಿದ್ದಕ್ಕಾಗಿ ನಮ್ಮ ಅಧಿಕಾರಿಗಳನ್ನು ನಾನು ಪ್ರಶಂಸಿಸುತ್ತೇನೆ" ಎಂದು ಡಿಜಿಪಿ ಸವಾಂಗ್ ಹೇಳಿದರು.
ಈ ಯೋಜನೆಯಡಿ ರಾಜ್ಯದ ಪ್ರಾಧಿಕಾರವು 72 ಗಂಟೆಗಳಲ್ಲಿ ಒಟ್ಟು 2,739 ಮಕ್ಕಳನ್ನು ರಕ್ಷಿಸಿದೆ. ಆಂಧ್ರದ ಪೆರೆಚೆರ್ಲಾ ಎಂಬ ಕಂಪನಿಯಿಂದ 10 ಬಾಲ ಕಾರ್ಮಿಕ ಮಕ್ಕಳನ್ನು ಇದೇ ವೇಳೆ ರಕ್ಷಿಸಲಾಗಿದೆ.