ನವದೆಹಲಿ: ಸಾಮೂಹಿಕ ಮನೋಭಾವದಿಂದ ಶುದ್ಧ ಇಂಧನ ಕಾರ್ಯಾಚರಣೆಗಗಾಗಿ ಭಾರತ ಕೆಲಸ ಮಾಡುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಮಂಗಳವಾರ ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ (ಐಎಸ್ಎ) ಆಯೋಜಿಸಿದ್ದ ವಿಶ್ವ ಸೌರ ತಂತ್ರಜ್ಞಾನ ಶೃಂಗಸಭೆಯಲ್ಲಿ ಮಾತನಾಡಿದ ಗೋಯಲ್, 'ಭಾರತವು ಶುದ್ಧ ಶಕ್ತಿಯೊಂದಿಗೆ ತೊಡಗಿಸಿಕೊಳ್ಳುವುದರ ಬಗ್ಗೆ ಉತ್ತಮವಾದ ಅಂಶವೆಂದರೆ ನಾವು ಸಾಮೂಹಿಕ ಮನಸ್ಥಿತಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಎಲ್ಲಾ ವಿಭಾಗೀಯ ಅಡೆತಡೆಗಳನ್ನು ಮುರಿಯುತ್ತೇವೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ನೀಡುತ್ತೇವೆ ಎಂದಿದ್ದಾರೆ'.
ಸೌರಶಕ್ತಿ ಮತ್ತು ಹೊಸ ತಂತ್ರಜ್ಞಾನಗಳು ಖಂಡಿತವಾಗಿಯೂ ನಮ್ಮ ನಾಳೆಯ ಜಗತ್ತನ್ನು ಸುಂದರ ಮತ್ತು ಉತ್ತಮ ವಾಸ ಸ್ಥಳವನ್ನಾಗಿ ಮಾಡಲು ಶಕ್ತಿಯನ್ನು ನೀಡುತ್ತದೆ ಎಂದು ಗೋಯಲ್ ಹೇಳಿದ್ದಾರೆ.
ಭಾರತದಲ್ಲಿ ಅನಿಲ ಆಧಾರಿತ ಆರ್ಥಿಕತೆಯನ್ನು ತರಲು ಧರ್ಮೇಂದ್ರ ಪ್ರಧಾನ್ ನೇತೃತ್ವದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಕೈಗೊಂಡಿರುವ ಉಪ ಕ್ರಮಗಳನ್ನು ಶ್ಲಾಘಿಸಿದ ಸಚಿವರು, ಪಳೆಯುಳಿಕೆ ಇಂಧನಗಳಿಂದ ನವೀಕರಿಸಬಹುದಾದ ಶಕ್ತಿಯ ಮೂಲಗಳೆಡೆಗೆ ದೇಶ ಸಾಗುತ್ತಿರುವುದು ಮಹತ್ವದ ಹೆಜ್ಜೆ ಎಂದಿದ್ದಾರೆ.
ಪ್ಯಾರಿಸ್ನಲ್ಲಿ ನಡೆದ ಸಿಒಪಿ-21 ಶೃಂಗಸಭೆಯಲ್ಲಿ ಇಂಗಾಲ ಹೊರ ಸೂಸುವಿಕೆಯ ಮಟ್ಟವನ್ನು ತಗ್ಗಿಸುವಲ್ಲಿ ಹಲವಾರು ವರ್ಷಗಳಲ್ಲಿ ತೆಗೆದುಕೊಂಡ ಪ್ರಮುಖ ಸಾಮೂಹಿಕ ನಿರ್ಧಾರವೆಂದು ವಿವರಿಸಿದ ಗೋಯಲ್, ಎಲ್ಲರಿಗೂ ಉತ್ತಮ ಭವಿಷ್ಯಕ್ಕಾಗಿ ಇದು ಅತ್ಯಂತ ಪ್ರಮುಖ ನಿರ್ಧಾರವಾಗಿದೆ. ನಮ್ಮ ಪ್ರಪಂಚದ ಸ್ವಚ್ಛ ಮತ್ತು ಉತ್ತಮ ಭವಿಷ್ಯದತ್ತ ಕೆಲಸ ಮಾಡಲು ನಾವು ನಿರ್ಧರಿಸಿದ್ದೇವೆ. ಇಂಗಾಲದ ಹೊರ ಸೂಸುವಿಕೆಯನ್ನು ತಗ್ಗಿಸಲು ಪ್ರತೀ ದೇಶವು ಏನು ಮಾಡಬೇಕೆಂದು ನಿರ್ಧರಿಸಿವೆ ಎಂದಿದ್ದಾರೆ.