ನವದೆಹಲಿ: ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಹಿನ್ನೆಲೆಯಲ್ಲಿ, ಬಿಜೆಪಿಯು ಸೆಪ್ಟೆಂಬರ್ ತಿಂಗಳ ಮಧ್ಯದಲ್ಲಿ ಒಂದು ವಾರದ ಅವಧಿಯ 'ಸೇವಾ ಸಪ್ತಾಹ' ಕಾರ್ಯಕ್ರಮವನ್ನು ಆಯೋಜಿಸಲಿದೆ.
ಒಂದು ವಾರದ ಅವಧಿಯ ಈ ಕಾರ್ಯಕ್ರಮದಲ್ಲಿ ರಾಷ್ಟ್ರದಾದ್ಯಂತ ಪಕ್ಷದ ಮುಖಂಡರು ವಿಭಿನ್ನ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ. ಸೇವಾ ಸಪ್ತಾಹದ ಸಮಯದಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳನ್ನು ತಿಳಿಸಿ, ಪಕ್ಷವು ಎಲ್ಲಾ ರಾಜ್ಯ ಘಟಕದ ಮುಖ್ಯಸ್ಥರಿಗೆ ಸುತ್ತೋಲೆ ಕಳುಹಿಸಿದೆ. ಇದು ಪ್ರಧಾನಿ ಮೋದಿಯವರ 70 ನೇ ಹುಟ್ಟುಹಬ್ಬವಾಗಿರುವುದರಿಂದ ಈ ಕಾರ್ಯಕ್ರಮದ ವಿಷಯವು 'ಸೆವೆಂಟಿ' ಆಗಿರಲಿದೆ.
ಪಕ್ಷದ ಕೇಂದ್ರ ಕಚೇರಿ ಉಸ್ತುವಾರಿ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಸೇವಾ ಸಪ್ತಾಹದಲ್ಲಿ ಹಮ್ಮಿಕೊಳ್ಳಬೇಕಾಗಿರುವ ಸಾಮಾಜಿಕ ಕಾರ್ಯಕ್ರಮಗಳ ಪಟ್ಟಿಯ ಸುತ್ತೋಲೆಯನ್ನು ಪ್ರತಿ ರಾಜ್ಯಗಳಿಗೆ ಕಳುಹಿಸಿದ್ದಾರೆ. ಈ ಕಾರ್ಯಕ್ರಮಗಳನ್ನು ಪ್ರತಿ ರಾಜ್ಯಗಳ ಬಿಜೆಪಿ ಆಯೋಜಿಸಬೇಕಾಗಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಳುಹಿಸಿರುವ ಸುತ್ತೋಲೆಯ ಪ್ರಕಾರ, ದೇಶದ ಪ್ರತಿ ಮಂಡಲಗಳಲ್ಲಿ 70 ವಿಶೇಷ ಚೇತನರಿಗೆ ಕೃತಕ ಕೈಕಾಲುಗಳು ಮತ್ತು ಇತರ ಉಪಕರಣಗಳನ್ನು ನೀಡಲಾಗುತ್ತದೆ. 70 ಅಂಧರಿಗೆ ಕನ್ನಡಕ ಹಾಗೂ 70 ಆಸ್ಪತ್ರೆಗಳಲ್ಲಿ ಬಿಜೆಪಿ ನಾಯಕರು ಹಣ್ಣುಗಳನ್ನು ವಿತರಿಸಲಿದ್ದಾರೆ.