ನವದೆಹಲಿ: ರಾಷ್ಟ್ರರಾಜಧಾನಿಯ ಗಡಿಯಲ್ಲಿ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಇಂದು ಲೋಹ್ರಿ ಹಬ್ಬವಾಗಿದ್ದು, ಎಲ್ಲ ಕಡೆ ಕೃಷಿ ಕಾನೂನು ಪ್ರತಿಗಳನ್ನು ದಹಿಸಿ ಹಬ್ಬ ಆಚರಿಸುವುದಾಗಿ ರೈತ ಮುಖಂಡರು ಹೇಳಿದ್ದಾರೆ.
ವರ್ಷದ ಆರಂಭದಲ್ಲಿ ಉತ್ತರ ಭಾರತದಲ್ಲಿ ಲೋಹ್ರಿ ಹಬ್ಬವನ್ನು ಹೆಚ್ಚಾಗಿ ಆಚರಿಸಲಾಗುತ್ತದೆ. ಇದು ದೀಪೋತ್ಸವಗಳಿಗೆ ಹೆಸರುವಾಸಿಯಾದ ಹಬ್ಬವಾಗಿದೆ. ಇಂದು ಸಂಜೆ ಪ್ರತಿಭಟನೆ ನಡೆಯುತ್ತಿರುವ ಎಲ್ಲ ಸ್ಥಳಗಳಲ್ಲಿ ಕೃಷಿ ಕಾಯ್ದೆಯ ಪ್ರತಿಗಳನ್ನು ಸುಟ್ಟು ಹಬ್ಬ ಆಚರಿಸುವುದಾಗಿ ರೈತ ಮುಖಂಡ ಮಂಜೀತ್ ಸಿಂಗ್ ಹೇಳಿದ್ದಾರೆ.
40 ರೈತ ಸಂಘಟನೆಗಳ ಒಕ್ಕೂಟ ಸಂಕ್ಯುಕ್ತ್ ಕಿಸಾನ್ ಮೋರ್ಚಾ ಸಭೆ ನಡೆಸಿ ಮುಂದಿನ ನಿರ್ಧಾರದ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲದೇ ಸುಪ್ರೀಂಕೋರ್ಟ್ ಕೃಷಿ ಕಾಯ್ದೆಗಳಿಗೆ ತಡೆ ನೀಡಿರೋದನ್ನು ಸ್ವಾಗತಿಸಿರುವ ರೈತ ಸಂಘಟನೆಗಳು, ಕಾನೂನುಗಳನ್ನು ಹಿಂಪಡೆಯುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ಕೇಂದ್ರ ಮತ್ತು ರೈತ ಸಂಘಗಳ ನಡುವೆ ಇರುವ ಬಿಕ್ಕಟ್ಟನ್ನು ಪರಿಹರಿಸಲು ಸುಪ್ರೀಂ ಕೋರ್ಟ್ ನಾಲ್ಕು ಸಮಿತಿಗಳನ್ನು ರಚಿಸಿ, ನಿರ್ದಿಷ್ಟ ಕಾಲದೊಳಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.