ಮಯೂರಭಂಜ್ (ಒಡಿಶಾ): ಇಲ್ಲಿನ ರೈತನೋರ್ವ ಬಿದಿರಿನ ಕೊಳವೆಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳಿಂದ ವಾಟರ್ ಲಿಫ್ಟಿಂಗ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ತನ್ನ ಕೃಷಿ ಪದ್ಧತಿಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾನೆ.
ಮಯೂರಭಂಜ್ ಜಿಲ್ಲೆಯ ಬದಮ್ಟಾಲಿಯಾ ಗ್ರಾಮದ ನಿವಾಸಿ ಮಹೂರ್ ತಿಪಿರಿಯಾ, ತಮ್ಮ ಕೃಷಿ ಭೂಮಿಗೆ ಹತ್ತಿರದ ನೀರಿನ ಮೂಲದಿಂದ ಸಮರ್ಥವಾಗಿ ನೀರಾವರಿ ಮಾಡುವ ಪ್ರಯತ್ನದಲ್ಲಿ ಈ ವ್ಯವಸ್ಥೆಯನ್ನು ರೂಪಿಸಿದರು. ಹೊಲದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ನದಿಯಿಂದ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ.
ಬಿದಿರನ್ನು ಇಳಿಜಾರಿನ ರಚನೆಯ ಮೇಲೆ ಇರಿಸಿದ್ದಾರೆ. ಅದರ ಚಕ್ರಗಳು ನೀರಿನ ಪ್ರವಾಹದೊಂದಿಗೆ ತಿರುಗುತ್ತವೆ. ಇದು ನೀರು ಮೇಲೆತ್ತಲು ಸಹಕಾರಿಯಾಗಿದೆ. ಬಳಸಿದ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಬಳಸಲಾಗಿದೆ. ಬಿದಿರಿನ ಕೊಳವೆಗಳ ಮೂಲಕ ಕೃಷಿಭೂಮಿಗಳ ಕಡೆಗೆ ನೀರನ್ನು ಹಾಯಿಸಲಾಗುತ್ತದೆ.
ತಿಪಿರಿಯಾ ಹಲವಾರು ಬಾರಿ ನೀರಾವರಿ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಕೇಳಿಕೊಂಡಿದ್ದರು. ಆದರೆ ಸರ್ಕಾರದಿಂದ ಸಹಾಯ ಪಡೆಯಲು ವಿಫಲವಾದ ನಂತರ ಅವರು ತಮ್ಮದೇ ನೀರಾವರಿ ವ್ಯವಸ್ಥೆ ರೂಪಿಸಿ ಇತರ ರೈತರಿಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ಅಸ್ಸೋಂ: ಮಹಿಳೆಯರಿಗೆ-ಹಿರಿಯ ನಾಗರಿಕರಿಗೆ ಉಚಿತ ಸೇವೆ ಒದಗಿಸಲಿವೆ ಪಿಂಕ್ ಬಸ್ಗಳು
"ನಾನು ಬಡವ ಮತ್ತು ಹಣವಿಲ್ಲ. ಸರ್ಕಾರಿ ಕಚೇರಿಗಳಿಗೆ ಅರ್ಜಿ ಸಲ್ಲಿಸಿದೆ. ಆದರೆ ಯಾರೂ ನಮಗೆ ಸಹಾಯ ಮಾಡಲು ಬರಲಿಲ್ಲ. ಹಾಗಾಗಿ ಈ ತಂತ್ರವನ್ನು ನನ್ನ ಸ್ವಂತ ಬುದ್ಧಿಮತ್ತೆಯಿಂದ ಅಭಿವೃದ್ಧಿಪಡಿಸಲು ನಾನು ನಿರ್ಧರಿಸಿದ್ದೇನೆ." ಎಂದು ತಿಪಿರಿಯಾ ಹೇಳಿದರು.