ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿಗಳಲ್ಲೊಬ್ಬನಾದ ಪವನ್ ಗುಪ್ತಾ ಸಲ್ಲಿಸಿದ್ದ ಪರಿಹಾರಾತ್ಮಕ (ಕ್ಯುರೇಟಿವ್) ಅರ್ಜಿಯನ್ನು ಗುರುವಾರ ಸುಪ್ರೀಂಕೋರ್ಟ್ ವಜಾಗೊಳಿದೆ.
ನಿರ್ಭಯಾ ಪ್ರಕರಣ ನಡೆದಾಗ ತಾನಿನ್ನೂ ಅಪ್ರಾಪ್ತ ವಯಸ್ಕನಾಗಿದ್ದೆ ಎಂಬ ನೆಪ ಮಾಡಿಕೊಂಡು ಪವನ್ ಗುಪ್ತಾ ತನಗೆ ವಿಧಿಸಲಾದ ಗಲ್ಲು ಶಿಕ್ಷೆಯನ್ನು ತಡೆಹಿಡಿಯಬೇಕೆಂದು ಮನವಿ ಮಾಡಿದ್ದ. ಆದರೆ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ವಜಾ ಮಾಡಿದೆ. ಹೀಗಾಗಿ ಗಲ್ಲು ಕುಣಿಕೆಯಿಂದ ಪಾರಾಗಬಹುದಾದ ನಿರ್ಭಯಾ ಹಂತಕರ ಎಲ್ಲ ದಾರಿಗಳು ಬಂದ್ ಆದಂತಾಗಿದೆ.
ಶುಕ್ರವಾರ ಗಲ್ಲು ಜಾರಿ: ಈಗ ಸುಪ್ರೀಂಕೋರ್ಟ್ ಪವನ್ ಗುಪ್ತಾ ಅರ್ಜಿ ವಜಾಗೊಳಿಸಿರುವುದರಿಂದ ನಾಳೆ ಬೆಳಗ್ಗೆ ನಾಲ್ವರೂ ಹಂತಕರಿಗೆ ಗಲ್ಲು ಶಿಕ್ಷೆ ಜಾರಿಯಾಗುವುದು ಖಚಿತವಾಗಿದೆ.
ನನ್ನ ಮಗಳಿಗೆ ನ್ಯಾಯ ಸಿಗಲಿದೆ: 'ನನ್ನ ಮಗಳ ಹಂತಕರಿಗೆ ನ್ಯಾಯಾಲಯಗಳು ಬಹಳಷ್ಟು ಬಾರಿ ಅವಕಾಶ ನೀಡಿದವು. ಹೀಗಾಗಿ ಅವರಿಗೆ ಗಲ್ಲು ಶಿಕ್ಷೆಯಾಗುವುದು ಬಹಳಷ್ಟು ಬಾರಿ ಮುಂದಕ್ಕೆ ಹೋಯಿತು. ಆದರೂ ನಾಳೆ ನನ್ನ ಮಗಳಿಗೆ ನ್ಯಾಯ ಸಿಗಲಿದೆ' ಎಂದು ನಿರ್ಭಯಾ ತಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಗಲ್ಲು ಶಿಕ್ಷೆಗೆ ತಡೆ ನೀಡಲು ದೆಹಲಿ ಕೋರ್ಟ್ ನಿರಾಕರಣೆ:
ಇನ್ನೊಂದೆಡೆ, ನಾಳಿನ ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ಕೋರಿ ಸಲ್ಲಿಕೆ ಮಾಡಿದ್ದ ಅರ್ಜಿಯನ್ನ ದೆಹಲಿ ಕೋರ್ಟ್ ವಜಾ ಮಾಡಿದೆ. ಈ ಮೂಲಕ ನಾಳೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕಾಯಂ ಎಂಬುದು ನಿಶ್ಚಿತವಾಗಿದೆ. ಈ ಸಂಬಂಧದ ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ಜಡ್ಜ್ ಧರ್ಮೆಂದರ್ ರಾಣಾ, ಅಪರಾಧಿಗಳ ಮನವಿಯನ್ನ ವಜಾ ಮಾಡಿದೆ.
ಅಕ್ಷಯ ಕುಮಾರ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾ ಅವರ ಕ್ಷಮಾಧಾನ ಅರ್ಜಿ ಬಾಕಿ ಇದೆ ಎಂಬ ಕಾರಣ ನೀಡಿ ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ಅಪರಾಧಿಗಳ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ.