ಹೈದರಾಬಾದ್: ಭಾರತದಲ್ಲಿ ಪುರುಷರು ಬಹಿರಂಗವಾಗಿ ಹೊರಬಂದು ಮಹಿಳೆಯರ ಸುರಕ್ಷತೆಗಾಗಿ ಧ್ವನಿ ಎತ್ತಿದ ಮೊದಲ ಉದಾಹರಣೆ 'ನಿರ್ಭಯಾ ಪ್ರಕರಣ'ವಾಗಿದೆ ಎಂದು ಕೇಂದ್ರ ಸಚಿವ ಸ್ಮೃತಿ ಇರಾನಿ ಹೇಳಿದ್ದಾರೆ.
"ಈ ಪ್ರಕರಣದಿಂದ ನಮ್ಮ ದೇಶದಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪುರುಷರು ಯಾವ ರೀತಿಯ ಭಾವನೆಯನ್ನು ಹೊಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ ಎಂದು ಭಾವಿಸುತ್ತೇನೆ. ನಿರ್ಭಯಾ ಗ್ಯಾಂಗ್ ರೇಪ್ ನಡೆದಾಗ ಪುರುಷರು ತಮ್ಮ ಮನೆಯ ಹೆಣ್ಣು ಮಕ್ಕಳ ಸುರಕ್ಷತೆಗಾಗಿ, ಅವರ ಪರವಾಗಿ ಇಂಡಿಯಾ ಗೇಟ್ ಬಳಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಧ್ವನಿ ಎತ್ತಿದ್ದರು" ಎಂದರು.
'ಪವರ್ ವುಮೆನ್ 2020' ಎಂಬ ಶೀರ್ಷಿಕೆಯ ಸಿಐಐ-ಇಂಡಿಯನ್ ವುಮೆನ್ ನೆಟ್ವರ್ಕ್ (ಐಡಬ್ಲ್ಯೂಎನ್) ಸಮಾವೇಶದ ಸಂವಾದಾತ್ಮಕ ಅಧಿವೇಶನದಲ್ಲಿ ಈ ಬಗ್ಗೆ ಸ್ಮೃತಿ ಮಾತನಾಡಿದರು.
ಡಿಸೆಂಬರ್ 16, 2012ರಂದು, 23 ವರ್ಷದ ಯುವತಿ ಚಲಿಸುವ ಬಸ್ಸಿನಲ್ಲಿ ಆರು ಪುರುಷರಿಂದ ಅತ್ಯಾಚಾರಕ್ಕೊಳಗಾಗಿದ್ದಳು. ಬಳಿಕ ಚಿಕಿತ್ಸೆ ಫಲಿಸದೆ ಆಕೆ ಸಾವನ್ನಪ್ಪಿದ್ದಳು. ಏಳು ವರ್ಷಗಳ ನಂತರ, ನಿರ್ಭಯಾ ಪ್ರಕರಣ ಎಂದು ಕರೆಯಲ್ಪಡುವ ಕೇಸ್ನಲ್ಲಿ ನಾಲ್ವರನ್ನು ಗಲ್ಲಿಗೇರಿಸಲಾಯಿತು.