ನವದೆಹಲಿ: ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈಗ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಅನಿವಾರ್ಯ. ಹೀಗಾಗಿ ಈ ಸೋಷಿಯಲ್ ಡಿಸ್ಟೆನ್ಸಿಂಗ್ಅನ್ನು ಖಚಿತಪಡಿಸಿಕೊಳ್ಳಲು ದೆಹಲಿಯ ಐದನೇ ತರಗತಿಯ ವಿದ್ಯಾರ್ಥಿಯೊಬ್ಬ ಹೊಸ ಸಾಧನವನ್ನು ಅಭಿವೃದ್ಧಿಪಡಿಸಿದ್ದಾನೆ. ಒಂದು ವೇಳೆ ಸಾಮಾಜಿಕ ಅಂತರ ಮರೆತರೆ ಇದು ನಿಮ್ಮನ್ನು ಕೂಡಲೇ ಎಚ್ಚರಿಸುತ್ತೆ.
ದೆಹಲಿಯ ಶಾಲಿಮಾರ್ ಬಾಗ್ ನಿವಾಸಿಯಾದ ಹಿಟೆನ್, 5ನೇ ತರಗತಿಯಲ್ಲಿ ಓದುತ್ತಿದ್ದಾನೆ. ಈತನ ವಯಸ್ಸು ಕೇವಲ 9. ಬಾಲಕ ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ಅಲ್ಟ್ರಾಸಾನಿಕ್ ಸೆನ್ಸಾರ್ಗಳನ್ನು ಅಳವಡಿಸಲಾಗಿದೆ. ಸಾಮಾಜಿಕ ಅಂತರ ಮರೆತು ಎರಡು ಅಡಿ ಅಂತರ ಕಾಪಾಡದಿದ್ದರೆ ಧ್ವನಿ ಮತ್ತು ಎಲ್ಇಡಿ ಬೆಳಕಿನಿಂದ ಇದು ಬಳಕೆದಾರರನ್ನು ಎಚ್ಚರಿಸುತ್ತದೆ.
ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಹಿಟೆನ್, ಎಲ್ಇಡಿ ಬೆಳಕಿನೊಂದಿಗೆ ಅಲಾರಂ ರಿಂಗಣಿಸಿದಾಗ ಬಳಕೆದಾರರು ಎಚ್ಚರಗೊಳ್ಳುತ್ತಾರೆ. ನನ್ನ ಶಾಲೆಯ ಫೇಸ್‌ಬುಕ್ ಪೇಜ್ನಲ್ಲಿ, ಸಾಮಾಜಿಕ ಅಂತರ ಕಾಪಾಡಲು ಒಂದು ಸಾಧನ ಇರಬೇಕೆಂದು ಉಲ್ಲೇಖಿಸಲಾಗಿತ್ತು. ಅದನ್ನು ನೋಡಿದ ಬಳಿಕ ಈ ಡಿವೈಸ್ ತಯಾರಿಸುವ ಆಲೋಚನೆ ಬಂತು ಎಂದು ಹೇಳಿದ್ದಾನೆ.
ಇದರಲ್ಲಿರುವ ಕೋಡಿಂಗ್ ಆಯ್ಕೆಯ ಮೂಲಕ ಸಾಧನದಲ್ಲಿನ ಅಂತರದ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಬಹುದು ಎಂದು ಹಿಟೆನ್ ಹೇಳುತ್ತಾನೆ.
ನಾನು ದೊಡ್ಡ ಮಟ್ಟದಲ್ಲಿ ಶಬ್ಧ ಉಂಟುಮಾಡುವ ಅಲ್ಟ್ರಾಸಾನಿಕ್ ಸಾಧನಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡುತ್ತಿದ್ದೆ. ಎಟಿಎಲ್ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿರುವ ನನ್ನ ಶಾಲೆಯ ಹಿರಿಯರು ಈ ಸಾಧನವನ್ನು ತಯಾರಿಸಲು ನನಗೆ ಪ್ರೇರಣೆ ನೀಡಿದರು. ಅಲ್ಲದೆ ನನ್ನ ಪೋಷಕರು ಮತ್ತು ಶಿಕ್ಷಕರ ಸಹಾಯದಿಂದ ಈ ಸಾಧನವನ್ನು ಪೂರ್ಣಗೊಳಿಸಿದೆ ಎಂದು ಹಿಟೆನ್ ತಾನು ಸಾಧನ ಅಭಿವೃದ್ಧಿಪಡಿಸಿದ ಬಗ್ಗೆ ವಿವರಿಸಿದ್ದಾನೆ.
ದೆಹಲಿಯ ಮಾಡರ್ನ್ ಪಬ್ಲಿಕ್ ಸ್ಕೂಲ್ನಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ಹಿಟೆನ್, ಪ್ರಸ್ತುತ ಎಲೆಕ್ಟ್ರಾನಿಕ್ ಕಾರು ಕುರಿತಂತೆ ಸಂಶೋಧನೆಗೆ ಮಾಹಿತಿ ಕಲೆ ಹಾಕುತ್ತಿದ್ದಾನೆ. ಯುಟ್ಯೂಬ್ಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಹೆಚ್ಚು ನೋಡುವ ಹಿಟೆನ್ ಭವಿಷ್ಯದಲ್ಲಿ ವಿಜ್ಞಾನಿಯಾಗಬೇಕೆಂಬ ಗುರಿ ಹೊಂದಿದ್ದಾನೆ.