ನವದೆಹಲಿ : ಭುವನೇಶ್ವರದಲ್ಲಿ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸರ್ಕಾರ ಕೈಗೊಂಡ ಸಿದ್ದತೆಗಳ ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ಹೆಚ್ಆರ್ಸಿ) ಒಡಿಶಾ ಸರ್ಕಾರಕ್ಕೆ ಸೂಚಿಸಿದೆ.
ಅಕ್ಟೋಬರ್ 7 ರಂದು ರಾಜ್ಯಪಾಲರ ಮನೆ ಬಳಿ ಪೆಟ್ರೋಲ್ ಪಂಪ್ ಸ್ಫೋಟ ಸಂಭವಿಸಿದ ಬಳಿಕ ಎನ್ಹೆಚ್ಆರ್ಸಿ ವರದಿ ಕೇಳಿದೆ. ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಎನ್ಹೆಚ್ಆರ್ಸಿ ಈ ಸೂಚನೆ ನೀಡಿದೆ. ಈ ವರ್ಷದ ಡಿಸೆಂಬರ್ 10 ರೊಳಗೆ ವರದಿ ನೀಡುವಂತೆ ಎನ್ಹೆಚ್ಆರ್ಸಿ ಸೂಚಿಸಿದೆ. ಆದೇಶದ ನಕಲು ಪ್ರತಿಯನ್ನು ಒಡಿಶಾ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಯವರಿಗೂ ನೀಡುವಂತೆ ತಿಳಿಸಿದೆ.
ತುರ್ತು ಪರಿಸ್ಥಿಯಲ್ಲಿ ಚಿಕಿತ್ಸೆ ನೀಡುವ ಸೌಲಭ್ಯ ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜಿನಲ್ಲಿ ಮಾತ್ರ ಇದೆ. ಭುವನೇಶ್ವರದಿಂದ ಕಟಕ್ವರೆಗೆ ಟ್ರಾಫಿಕ್ ಜಾಂ ಇರುವುದರಿಂದ ಗಾಯಾಳು ಅಥವಾ ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬವಾಗುತ್ತದೆ. ಹಾಗಾಗಿ, ಈ ಸಮಸ್ಯೆಗೆ ಪರಿಹಾರ ಬೇಕಿದೆ ಎಂದು ಅರ್ಜಿದಾರರು ಎನ್ಹೆಚ್ಆರ್ಸಿಗೆ ತಿಳಿಸಿದ್ದರು.
ರಾಜಧಾನಿಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ನಿಭಾಯಿಸಲು ಇರುವ ಸೌಲಭ್ಯಗಳು ಮತ್ತು ನಗರದಲ್ಲಿ ಅಗ್ನಿ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸುವಂತೆ ಅರ್ಜಿದಾರರು ಮನವಿ ಮಾಡಿದ್ದರು. ಭುವನೇಶ್ವರದಿಂದ ಕಟಕ್ಗೆ ಸಾಗಿಸುವ ಮಾರ್ಗದ ಟ್ರಾಫಿಕ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದ್ದರು.