ನವದೆಹಲಿ: ಅರ್ಥಶಾಸ್ತ್ರದಲ್ಲಿ 2019ನೇ ಸಾಲಿನ ನೊಬೆಲ್ ಪ್ರಶಸ್ತಿ ಪಡೆದುಕೊಂಡಿರುವ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಮೊದಲ ಪ್ರತಿಕ್ರಿಯೆಯಲ್ಲೇ ಭಾರತೀಯ ಆರ್ಥಿಕತೆ ತುಂಬಾ ದುರ್ಬಲವಾಗಿದೆ ಎಂದು ಹೇಳಿದ್ದಾರೆ.
ತಮಗೆ ನೊಬೆಲ್ ಪ್ರಶಸ್ತಿ ಸಿಗುತ್ತಿದ್ದಂತೆ ಮಾತನಾಡಿರುವ ಅವರು, ಭಾರತೀಯ ಅನ್ನದಾತರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ರೈತರಿಗೆ ಸಿಗುತ್ತಿರುವ ನಿವ್ವಳ ಆದಾಯ ಉತ್ತಮವಾಗಿಲ್ಲ ಎಂದಿರುವ ಅವರು, ಭಾರತದ ನಿಧಾನಗತಿಯ ಆರ್ಥಿಕತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವಕಾಶ ಸೃಷ್ಠಿಸಲು ಸಹಾಯ ಮಾಡಿರುವ ಎನ್ಆರ್ಇಜಿಎ ಯೋಜನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಭಾರತದ ಆರ್ಥಿಕತೆ ಅತ್ಯಂತ ದುರ್ಬಲವಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಅವುಗಳನ್ನ ಸುಧಾರಿಸುವ ಯಾವುದೇ ಭರವಸೆ ಕಾಣುತ್ತಿಲ್ಲ ಎಂದಿದ್ದಾರೆ. ಜತೆಗೆ ಸರ್ಕಾರ ಆರ್ಥಿಕತೆಗಾಗಿ ತೆಗೆದುಕೊಂಡಿರುವ ನಿರ್ಧಾರಗಳು ಸಹ ಈ ಹಿನ್ನಡೆಗೆ ಕಾರಣವಾಗಿದೆ ಎಂದಿದ್ದಾರೆ.
ಬರೋಬ್ಬರಿ 21 ವರ್ಷಗಳ ಬಳಿಕ ಭಾರತದ ಅರ್ಥಶಾಸ್ತ್ರಜ್ಞರೊಬ್ಬರಿಗೆ ನೊಬೆಲ್ ಗೌರವ ಸಿಕ್ಕಿದೆ. ಎಸ್ತರ್ ಡುಫ್ಲೋ ಅವರು ಅಭಿಜಿತ್ ಬ್ಯಾನರ್ಜಿ ಅವರ ಪತ್ನಿಯಾಗಿದ್ದು ಅವರಿಗೂ ಈ ಗೌರವ ಸಿಕ್ಕಿದೆ.