ಕಠ್ಮಂಡು: ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಭಾರತದೊಂದಿಗೆ ಮಾತುಕತೆ ನಡೆಸಿ ಕಲಾಪಣಿ ಸಮಸ್ಯೆಗೆ ತಮ್ಮ ಸರ್ಕಾರವು ಪರಿಹಾರ ಕಂಡುಕೊಳ್ಳಲಿದೆ ಎಂದು ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಹೇಳಿದ್ದಾರೆ.
ಬುಧವಾರ ನಡೆದ ಸಂಸತ್ತಿನಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಮಾತುಕತೆ ನಡೆಸುವ ಮೂಲಕ ಭಾರತ ಆಕ್ರಮಿಸಿಕೊಂಡ ಭೂಮಿಯನ್ನು ನಾವು ಮರಳಿ ಪಡೆಯುತ್ತೇವೆ ಎಂದು ಪುನರುಚ್ಚರಿಸಿದ್ದಾರೆ.
ಭಾರತವು ಕಾಳಿ ದೇವಾಲಯವನ್ನು ನಿರ್ಮಿಸಿದೆ, ಸಾಲದೆಂಬಂತೆ ಕೃತಕ ಕಾಳಿ ನದಿಯನ್ನು ಹುಟ್ಟಿಸುವ ಮೂಲಕ ನೇಪಾಳದ ಪ್ರದೇಶವನ್ನು ವಶಪಡಿಸಿಕೊಂಡಿದೆ. ಕಲಾಪಣಿಯಲ್ಲಿ ಸೈನ್ಯವನ್ನು ನಿಯೋಜಿಸುವ ಮೂಲಕ ಭಾರತ ನೇಪಾಳಿ ಪ್ರದೇಶವನ್ನು ತನ್ನದೆನ್ನುತ್ತಿದೆ ಎಂದು ಆರೋಪಿಸಿದರು.
ಲಿಂಪಿಯಾಧುರಾ, ಲಿಪುಲೆಖ್, ಮತ್ತು ಕಲಾಪಣಿ ಪ್ರದೇಶಗಳು ನೇಪಾಳಕ್ಕೆ ಸೇರಿದ್ದಾಗಿವೆ. ನೂತನ ನಕ್ಷೆ ಪ್ರಕಾರ ಗಡಿ ಒತ್ತುವರಿ ಮಾಡುವಂತಿಲ್ಲ ಎಂದು ಉಭಯ ರಾಷ್ಟ್ರಗಳ ಮಧ್ಯೆ ಒಪ್ಪಂದ ಆಗಿದೆ. ಆದರೆ, ಈ ಪ್ರದೇಶಗಳನ್ನು ಭಾರತ ತನ್ನದೆಂದು ತೋರಿಸುತ್ತಿದೆ. ಸೂಕ್ತ ಹಾಗೂ ಪುರಾತನ ದಾಖಲೆಗಳ ಆಧಾರದ ಮೇಲೆ ಸಂವಾದ ನಡೆಸಿ ಈ ಪ್ರದೇಶಗಳನ್ನು ತಮ್ಮದಾಗಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಭಾರತ-ಚೀನಾ ಯುದ್ಧಕ್ಕೂ (1962) ಮುನ್ನ ಕಠ್ಮಂಡುವಿಗೆ ಈ ಮೂರು ಪ್ರದೇಶದ ಮೇಲೆ ಹಿಡಿತವಿತ್ತು ಎಂದು ನೇಪಾಳದ ಅಧಿಕಾರಿಗಳು ತಿಳಿಸುತ್ತಾ ಬಂದಿದ್ದಾರೆ. ಹಿಂದೆ ದೆಹಲಿ ಸರ್ಕಾರವು ನೇಪಾಳಿ ಆಡಳಿತಗಾರರ ಅನುಮತಿಯೊಂದಿಗೆ ತನ್ನ ಸೈನ್ಯವನ್ನು ಇಲ್ಲಿ ತಾತ್ಕಾಲಿಕ ಇರಿಸಿತ್ತು. ಆದರೆ, ಅದು ಇಂದಿಗೂ ತನ್ನ ಪಡೆಗಳನ್ನು ತೆಗೆದುಹಾಕಿಲ್ಲ. ಈ ವಾರದೊಳಗೆ ಗಡಿ ಒತ್ತುವರಿ ಸಮಸ್ಯೆ ಕುರಿತು ಒಂದು ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೇ 8ರಂದು ಉತ್ತರಾಖಂಡದ ಧಾರ್ಚುಲಾದೊಂದಿಗೆ ಲಿಪುಲೆಖ್ ಅನ್ನು ಸಂಪರ್ಕಿಸುವ 80 ಕಿ.ಮೀ ಉದ್ದದ ರಸ್ತೆಯನ್ನು ಉದ್ಘಾಟಿಸಿದ ನಂತರ ಈ ಸಮಸ್ಯೆ ಬಿಗಡಾಯಿಸಿದೆ ಎನ್ನಲಾಗುತ್ತಿದೆ.